ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದ ಕ್ರೂರವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಯುವಕರನ್ನು ಮಾಜಿ ಶಾಸಕ ಮೊಹಿದ್ದೀನ್ ಬಾವ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಕ್ರಿಯೆಗೆ ಪ್ರತಿಕ್ರಿಯೆಯ ಹೇಳಿಕೆಯಿಂದ ಪ್ರಚೋದಿತರಾದ ಯುವಕರು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ನಿನ್ನೆ ಕಡಬದಲ್ಲಿ ಅಡ್ಡೂರು ಮೂಲದ ಇಬ್ಬರೂ ಜವಳಿ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಯು ಜಿಲ್ಲೆಯಲ್ಲಿ ಮತ್ತೊಮ್ಮೆ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ನೈತಿಕ ಪೋಲಿಸ್ ಗಿರಿ ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗೆ ಶಿಕ್ಷೆಯನ್ನು ನೀಡುವ ಬದಲಿಗೆ ಹಲ್ಲೆಗೊಳಗಾದ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲೆ ಮಾಡಿದ ಪೋಲಿಸ್ ಇಲಾಖೆ ಯಾವುದೋ ಒಂದು ಪಕ್ಷದ ಅಣತಿಯಂತೆ ಕೆಲಸ ಮಾಡುತ್ತಿದೆ ಎಂಬ ಅನುಮಾನವನ್ನು ಸಾರ್ವಜನಿಕರಲ್ಲಿ ಹುಟ್ಟುವಂತೆ ಮಾಡಿದೆ ಎಂದರು.
ಈಗಾಗಲೇ ಎಸ್ ಪಿ ಜೊತೆಗೆ ಮಾತನಾಡಿ ತಕ್ಷಣವೇ ತಪಿತಸ್ಥರ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಒತ್ತಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಮ್ಮ ಜಿಲ್ಲೆಯ ಯಾವುದೇ ಧರ್ಮದ ಯುವಕರಿಗೂ ಆಗದೆ ಇರದಂತೆ ಸರ್ಕಾರ ಮತ್ತು ಪೋಲಿಸ್ ಇಲಾಖೆಯು ಎಚ್ಚರಿಕೆ ವಹಿಸಲಿ, ದಯವಿಟ್ಟು ಯುವಕರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿ ಕೊಡದೆ, ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆಗಾಗಿ ಒಗ್ಗಟ್ಟಾಗಿರಬೇಕು ಎಂದು ಮನವಿ ಮಾಡಿದ್ದಾರೆ.