ಮೈಸೂರು: ತಮ್ಮನ್ನು ಕರಿಯ ಎಂದು ಕರೆದಿದ್ದ ಸಚಿವ ಬಿ.ಝಡ್. ಝಮೀರ್ ಅಹಮದ್ ಖಾನ್ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಚಾಮುಂಡಿ ತಾಯಿ ಮುಂದೆ ನಿಂತು ಹೇಳುತ್ತಿದ್ದೇನೆ. ಬಸವರಾಜ ಹೊರಟ್ಟಿ ಅವತ್ತು ಒಮ್ಮೆ ನನ್ನನ್ನು ಕುಮಾರ ಎಂದಾಗ ಅವರನ್ನು ಹೊಡೆಯಲು ಹೋಗಿದ್ದ ಗಿರಾಕಿ ಇವರು. ಹೊರಟ್ಟಿ ಅವರನ್ನೇ ಕೇಳಬಹುದು. ಅವತ್ತು ಜಮೀರ್ ಹೊಡೆಯಲು ಬಂದಿರಲಿಲ್ಲವಾ ಅಂತ ಕೇಳಬಹುದು’ ಎಂದರು.
ಕರಿಯ, ಕುಳ್ಳ ಎಂದು ಮಾತಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಮೀರ್ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂಥ ಮಾತು ಹೇಳಿದವರ ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಈ ಸರ್ಕಾರ? ಈಗೇಕೆ ಸುಮ್ಮನೆ ಇದೆ? ಎಂದು ಕೇಳಿದರು.
ಮುಖ್ಯಮಂತ್ರಿಗೆ ದೇವೇಗೌಡರು ಗರ್ವಭಂಗ ಮಾಡುತ್ತೇನೆ, ಸೊಕ್ಕು ಮುರಿಯುತ್ತೇನೆ ಎನ್ನುವುದು ಮಾನನಷ್ಟ ಹೇಳಿಕೆನಾ ಎಂದು ಪ್ರಶ್ನಿಸಿದರು.