Home ಟಾಪ್ ಸುದ್ದಿಗಳು ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಆದರೆ, ಚುನಾವಣೆ ವೇಳೆ ಕಿಚ್ಚು ಹೊತ್ತಿಸಿದ ಹೋರಾಟವನ್ನು ಒಪ್ಪಿಕೊಳ್ಳುವುದಿಲ್ಲ: ಕಮಲಾ ಹ್ಯಾರಿಸ್

ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಆದರೆ, ಚುನಾವಣೆ ವೇಳೆ ಕಿಚ್ಚು ಹೊತ್ತಿಸಿದ ಹೋರಾಟವನ್ನು ಒಪ್ಪಿಕೊಳ್ಳುವುದಿಲ್ಲ: ಕಮಲಾ ಹ್ಯಾರಿಸ್

ವಾಷಿಂಗ್ಟನ್: ನಮ್ಮ ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದು ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಹೇಳಿದ್ದಾರೆ.


ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬೆನ್ನಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೊದಲಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.


ಚುನಾವಣಾ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ನಿಮ್ಮೆಲ್ಲರ ಬೆಂಬಲಕ್ಕೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಆಭಾರಿಯಾಗಿದ್ದೇನೆ. ಇಂದು ಮುಂಜಾನೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಾನು ಮಾತುಕತೆ ನಡೆಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿಗಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿಸಲು ನಾವು ಅವರಿಗೆ ಸಹಕರಿಸುತ್ತೇವೆಂದು ಹೇಳಿದರು.


ನಾವು ಯಾವುದಕ್ಕಾಗಿ ಹೋರಾಡಿದ್ದೆವೋ, ಮತ ಚಲಾಯಿಸಿದ್ದೆವೋ ಆ ಫಲಿತಾಂಶ ನಮಗೆ ದೊರಕಿಲ್ಲ. ಆದರೆ, ಅಮೆರಿಕಾದ ಭರವಸೆಯ ಬೆಳಕು ಯಾವತ್ತೂ ಪ್ರಕಾಶಮಾನವಾಗಿ ಬೆಳಗಲಿದೆ. ನಮ್ಮ ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟವನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.


ದೇಶದ ಜನರ ಸ್ವಾತಂತ್ರ್ಯ, ನ್ಯಾಯ, ಅವಕಾಶ ಮತ್ತು ಘನತೆಗಾಗಿ ಹೋರಾಟ ಮುಂದುವರಿಯಲಿದೆ. ಈ ಹಿನ್ನಡೆಗಳ ನಡುವೆಯೂ ಆಶಾವಾದ, ನಂಬಿಕೆ, ಸತ್ಯ ಮತ್ತು ಬೆಳಕು ನಮ್ಮನ್ನು ಮುನ್ನಡೆಸಲಿದೆ. ನಾವು ಕರಾಳ ದಿನಗಳನ್ನು ಸಮೀಪಿಸುತ್ತಿದ್ದೇವೆ ಎಂಬ ಆತಂಕ ಜನರಲ್ಲಿದೆ. ಆದರೆ, ಹಾಗಾಗುವುದಿಲ್ಲ ಎಂದು ಭಾವಿಸುತ್ತೇನೆಂದು ಹೇಳಿದರು.

Join Whatsapp
Exit mobile version