Home ಕರಾವಳಿ ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾ ಟ್ರಾಫಿಕ್ ಜಾಮ್

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾ ಟ್ರಾಫಿಕ್ ಜಾಮ್

►ಕಿಲೋ ಮೀಟರ್ ಗಟ್ಟಲೆ ಸಾವಿರಾರು ವಾಹನಗಳ ಸಾಲು

ಬಂಟ್ವಾಳ: ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕದಲ್ಲಿ ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಕಳೆದ ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದ್ದು, ಕಲ್ಲಡ್ಕದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ವಾಹನ ಸವಾರರು ನರಕ ಯಾತನೆಯನ್ನೇ ಅನುಭವಿಸುತ್ತಿದ್ದಾರೆ. ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ಇಲ್ಲದ್ದರಿಂದ ವಾಹನಗಳು ಎಲ್ಲೆಂದರಲ್ಲಿ ಸಂಚರಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಜನಸಾಮಾನ್ಯರ ಪಾಡು ನರಕಸದೃಶವಾಗಿತ್ತು.

ಅರೆಬರೆ ಕಾಮಗಾರಿಯಿಂದಾಗಿ ಹೊಂಡಗುಂಡಿಗಳಲ್ಲಿ ನೀರು ನಿಂತು ,ಹೆದ್ದಾರಿಯುದ್ದಕ್ಕೂ ರಸ್ತೆಯನ್ನು ಹುಡುಕಿಕೊಂಡು ಸಂಚಾರ ನಡೆಸಬೇಕಾದ ಸ್ಥಿತಿ ಸವಾರರದ್ದಾಗಿದೆ.

ಬಿ.ಸಿ. ರೋಡು–ಅಡ್ಡಹೊಳೆವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ಬೇಸಿಗೆ ಕಾಲದಲ್ಲಿ ಆರಂಭವಾಗಿದ್ದು, ಬೇಸಿಗೆ ಕಾಲದಲ್ಲಿ ಧೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ಹೊಂಡಗುಂಡಿ, ರಸ್ತೆ ತುಂಬಾ ನೀರಿನ ಸಮಸ್ಯೆ. ಸಾರ್ವಜನಿಕರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯಕಂಡುಬಂತು.

Join Whatsapp
Exit mobile version