Home ಜಾಲತಾಣದಿಂದ ಹೆಡ್​​ಕಾನ್ಸ್​ಟೇಬಲ್​ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಕಾಲಿಗೆ ಗುಂಡೇಟು

ಹೆಡ್​​ಕಾನ್ಸ್​ಟೇಬಲ್​ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಕಾಲಿಗೆ ಗುಂಡೇಟು

ಕಲಬುರಗಿ: ಅಕ್ರಮ ಮರಳು ಸಾಗಣೆ ತಡೆಯಲು ಹೋದ ಹೆಡ್​​ಕಾನ್ಸ್​ಟೇಬಲ್​ ಮೈಸೂರು ಚೌಹಾಣ್(51) ಅವರನ್ನು​ ಟ್ರ್ಯಾಕ್ಟರ್​ ಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಯಿಬಣ್ಣ ಕರಜಗಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

 ಜಿಲ್ಲೆಯ ಜೇವರ್ಗಿ ಠಾಣೆ ಪೊಲೀಸರು, ವಿಜಯಪುರ ಜಿಲ್ಲೆಯ ಆಲಮೇಲ ಜಮೀನಿನಲ್ಲಿ ಅಡಗಿದ್ದ ಆರೋಪಿ ಸಾಯಿಬಣ್ಣ ಕರಜಗಿಯನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಠಾಣೆ ಕರೆತರುತ್ತಿದ್ದರು. ಈ ವೇಳೆ ಸಾಯಿಬಣ್ಣ ಕರಜಗಿ ಜೇವರ್ಗಿ ತಾಲೂಕಿನ ಮಂದೇವಾಲ್ ಬಳಿ ಮೂತ್ರ ವಿಸರ್ಜನೆಗೆ ಅಂತ ಕೆಳಗೆ ಇಳಿದಿದ್ದಾನೆ.

ನಂತರ ಸಾಯಿಬಣ್ಣ ಪಿಎಸ್ಐ ಯಡ್ರಾಮಿ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪಿಎಸ್​ಐ ಯಡ್ರಾಮಿ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಗಾಯಾಳು ಸಾಯಿಬಣ್ಣನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

2016ರಿಂದ ನೆಲೋಗಿ ಠಾಣಾ ವ್ಯಾಪ್ತಿಯ ರೌಡಿಶೀಟರ್

ಆರೋಪಿ ಸಾಯಿಬಣ್ಣ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿಯಾಗಿದ್ದು, 2016ರಿಂದ ನೆಲೋಗಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಯತ್ನ, ಡಕಾಯಿತಿ ಪ್ರಕರಣಗಳಿವೆ.

ಆರೋಪಿ ಸಾಯಿಬಣ್ಣ ಜೇವರ್ಗಿ ಜೂನ್ 15ರಂದು ಮರಳು ಸಾಗಣೆ ಟ್ರ್ಯಾಕ್ಟರ್​ ಹರಿಸಿ ಹೆಡ್​ಕಾನ್ಸ್​ಟೇಬಲ್​ ಮೈಸೂರು ಚೌಹಾಣ್(51)​ ಹತ್ಯೆ ಮಾಡಿ ಪರಾರಿಯಾಗಿದ್ದನು. ನಂತರ ಆರೋಪಿ ರೌಡಿಶೀಟರ್​ ಸಾಯಿಬಣ್ಣ ಕರಜಗಿ ಬಂಧನಕ್ಕಾಗಿ 3 ತಂಡ ರಚಿಸಲಾಗಿತ್ತು. ಈತ ವಿಜಯಪುರ ಜಿಲ್ಲೆ ಆಲಮೇಲ ಬಳಿ ಜಮೀನಿನಲ್ಲಿ ಅಡಗಿದ್ದು, ಬಂಧಿಸಿ ಕರೆ ತರಲಾಗಿದೆ. ಆರೋಪಿಗಳಾದ ಸಾಯಿಬಣ್ಣ ಕರಜಗಿ, ಸಿದ್ದಪ್ಪ ಇಬ್ಬರೂ ಸಹೋದರರು ಎಂದು ಕಲಬುರಗಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್​ ಹೇಳಿದ್ದಾರೆ.

ದುಷ್ಕರ್ಮಿಗಳು ಭೀಮಾ ನದಿಯಿಂದ ಟ್ರ್ಯಾಕ್ಟರ್​ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಮರಳು ಸಾಗಣೆ ಟ್ರ್ಯಾಕ್ಟರ್​ ತಡೆದು ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೆಚ್​ಸಿ ಮೈಸೂರು ಚೌಹಾಣ್, ಪಿಸಿ ಪ್ರಮೋದ್ ದೊಡ್ಮನಿ ಅವರಿಬ್ಬರೂ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕ್​ನಲ್ಲಿ ತೆರಳಿದ್ದರು. ಆ ವೇಳೆ ಪೊಲೀಸರಿದ್ದ ಬೈಕ್​ ಮೇಲೆ ಮರಳು ಟ್ರ್ಯಾಕ್ಟರ್​ ದುಷ್ಕರ್ಮಿಗಳು ಹತ್ತಿಸಿದ್ದರು. ನೆಲೋಗಿ ಠಾಣೆ ಹೆಡ್​ಕಾನ್ಸ್​ಟೇಬಲ್​ ಮೈಸೂರು ಚೌಹಾಣ್​ (51) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಕಾನ್ಸ್​ಟೇಬಲ್​ ಪ್ರಮೋದ್ ದೊಡ್ಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Join Whatsapp
Exit mobile version