Home ಟಾಪ್ ಸುದ್ದಿಗಳು ನ್ಯಾ. ಉತ್ತಮ್ ಆನಂದ್ ಸಾವು ಪ್ರಕರಣ | CBI ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ...

ನ್ಯಾ. ಉತ್ತಮ್ ಆನಂದ್ ಸಾವು ಪ್ರಕರಣ | CBI ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಸಮ್ಮತಿ

ಜಾರ್ಖಂಡ್ : ನ್ಯಾಯಮೂರ್ತಿ ಉತ್ತಮ್ ಆನಂದ್ ಸಾವಿನ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಜಾರ್ಖಂಡ್ ಹೈಕೋರ್ಟ್ ಮಂಗಳವಾರ ಸಮ್ಮತಿ ಸೂಚಿಸಿದೆ.

ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಆನಂದ್, ಜುಲೈ 28 ರಂದು ಬೆಳಗ್ಗೆ ವಾಯುವಿಹಾರದಲ್ಲಿ ತೊಡಗಿದ್ದಾಗ ವಾಹನವೊಂದು ಅನುಮಾನಾಸ್ಪದವಾಗಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಅಪಘಾತ ಎಂದೇ ಭಾವಿಸಲಾಗಿತ್ತಾದರೂ ರಸ್ತೆಯ ಅಂಚಿನಲ್ಲಿ ಬೆಳಗಿನ ವಾಯುವಿಹಾರದಲ್ಲಿ ತೊಡಗಿದ್ದ ಅವರನ್ನು ಉದ್ದೇಶಪೂರ್ವಕವಾಗಿ ವಾಹನವೊಂದು ಡಿಕ್ಕಿ ಹೊಡೆದು ಬೀಳಿಸಿರುವುದು ಸಿಸಿಟಿವಿ ದೃಶ್ಯದಿಂದ ಕಂಡುಬಂದಿತ್ತು.

ಘಟನೆಯ ಕುರಿತು ತನಿಖೆ ನಡೆಸುವ ಉದ್ದೇಶದಿಂದ ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ರಚನೆಗೆ ಸೂಕ್ತ ಆದೇಶ/ನಿರ್ದೇಶನ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿತ್ತು. ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆಯೂ ಅದು ಸೂಚಿಸಿತ್ತು.

ಈ ಮಧ್ಯೆ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಿತು. ಮಂಗಳವಾರ ಈ ವಿಚಾರ ತಿಳಿಸಿದಾಗ ಮುಖ್ಯ ನ್ಯಾಯಮೂರ್ತಿ ಡಾ.ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ್ ಅವರಿದ್ದ ಪೀಠ ಅದಕ್ಕೆ ಸಮ್ಮತಿ ಸೂಚಿಸಿತು. ಸಿಬಿಐಗೆ ತಾತ್ವಿಕ ಬೆಂಬಲ ಮತ್ತು ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಯಿತು.

ಜಾರ್ಖಂಡ್ ರಾಜ್ಯದ ನ್ಯಾಯಾಂಗ ಅಧಿಕಾರಿಗಳಿಗೆ ಭದ್ರತೆ ಕಲ್ಪಿಸುವಂತೆ ಡಿಜಿಪಿಗೆ ಪೀಠ ಸೂಚಿಸಿದೆ. ಘಟನೆಗೆ ಬೆಳಿಗ್ಗೆ 5 ರ ಸುಮಾರಿಗೆ ನಡೆದಿದ್ದು ಮಧ್ಯಾಹ್ನ 1 ಗಂಟೆಗೆ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ಸಲ್ಲಿಸಲು ಏಕೆ ವಿಳಂಬವಾಗಿದೆ ಎಂದು ನ್ಯಾಯಾಲಯ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.

ಈಗಾಗಲೇ ಘಟನೆ ಸಂಬಂಧ 17 ಮಂದಿಯನ್ನ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version