ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಯೆನೆಪೋಯಾ ವಿಶ್ವವಿದ್ಯಾಲಯ (ಡೀಮ್ಡ್ ಯೂನಿವರ್ಸಿಟಿ) ಹಾಗೂ ಟಾಟಾ ಟ್ರಸ್ಟ್ ನ ಸಹಯೋಗದಲ್ಲಿ ಇದೇ ಜೂನ್ 11 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಅತ್ಯಾಧುನಿಕ “ಜುಲೇಖಾ ಯೆನೆಪೋಯಾ ಆಂಕೊಲಾಜಿ ಸಂಸ್ಥೆ”ಯನ್ನು ಉದ್ಘಾಟಿಸಲಾಗುತ್ತಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಮುಂಬೈನಾ ಟಾಟಾ ಟ್ರಸ್ಟ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಶ್ರೀನಾಥ್ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ (ಡೀಮ್ಡ್ ಯೂನಿರ್ವಿಸಿಟಿ) ಯೆನೆಪೋಯ ವಿವಿ ಉಪಕುಲಪತಿ ಡಾ. ಎಂ. ವಿಜಯಕುಮಾರ್ , ಇಂದು ಭಾರತದಲ್ಲಿ ಅತಿಹೆಚ್ಚು ಜನ ಸಾವಿಗೀಡಾಗುತ್ತಿರುವ ಕಾಯಿಲೆಗಳ ಪೈಕಿ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಹಲವು ರೀತಿಯ ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೂ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆರ್ಥಿಕವಾಗಿ ಕುಗ್ಗಿಸುವಂತೆ ಮಾಡುತ್ತಿದೆ. ಕೆಲವು ಕಡೆ ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ಲಭಿಸದೇ ಇರುವುದು ಸಹ ಸಾವಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ನೀಡುತ್ತಾ, ಜನರ ಮೆಚ್ಚುಗೆಗೆ ಪಾತ್ರರಾಗಿ ಬಂದಿರುವ ಟಾಟಾ ಟ್ರಸ್ಟ್, ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಡೀಮ್ಡ್ ಯೂನಿವರ್ಸಿಟಿ ಪಟ್ಟಿಗೆ ಸೇರಿರುವ ಯೆನೆಪೋಯಾ ಶೈಕ್ಷಣಿಕ ಸಂಸ್ಥೆಯು ಸಹ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಡೆಸುವ ಮೂಲಕ ಕಳೆದ ದಶಕದಿಂದ ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸುಧಾರಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಾ ಬಂದಿದೆ. ಇದೀಗ ಪ್ರತಿಷ್ಠಿತ ಟಾಟಾ ಸಂಸ್ಥೆಯ ಸಹಭಾಗಿತ್ವದಲ್ಲಿ ನೂತನವಾಗಿ ಆಂಕೋಲಾಜಿ ಸಂಸ್ಥೆಯನ್ನು ತೆರೆಯುತ್ತಿರುವುದು ಜುಲೇಖಾ ಯೆನೆಪೋಯಾ ಸಂಸ್ಥೆ ಸಾಧಿಸಿದ ಹೊಸ ಮೈಲುಗಲ್ಲಾಗಿದೆ. ಜುಲೇಖಾ ಯೆನೆಪೋಯಾ ಸಂಸ್ಥೆಯ ಪ್ರಮುಖ ಆಶಯವೆಂದರೆ ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗೂ ಕಡಿಮೆ ಮೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೊಡಿಸುವುದಾಗಿ ಎಂದು ಹೇಳಿದರು.
ಮುಂಬೈನ ಟಾಟಾ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಶ್ರೀನಾಥ್ ಮಾತನಾಡಿ, ಟಾಟಾ ಟ್ರಸ್ಟ್ಗಳು ಹಲವು ದಶಕಗಳಿಂದ ಕ್ಯಾನ್ಸರ್ ಆರೈಕೆಯಲ್ಲಿ ಪ್ರವರ್ತಕ ಕೆಲಸವನ್ನು ಮಾಡುತ್ತಿವೆ. ದೇಶದಾದ್ಯಂತ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಬೆಂಬಲ ಮತ್ತು ಸಾಮರ್ಥ್ಯವನ್ನು ಬೆಳೆಸುವಲ್ಲಿ ಅವರ ಪ್ರಯತ್ನಗಳು ಅಪಾರವಾಗಿವೆ. “ಟಾಟಾ ಟ್ರಸ್ಟ್ಸ್ ಭಾರತದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ, ನಾವು ‘ವಿತರಿಸಿದ ಕ್ಯಾನ್ಸರ್ ನಿಯಂತ್ರಣ ಮಾದರಿ’ ಅನ್ನು ಪರಿಕಲ್ಪನೆ ಮಾಡಿದ್ದೇವೆ, ಇದು ಜಾಗೃತಿ, ಆರಂಭಿಕ ರೋಗನಿರ್ಣಯ, ಪ್ರವೇಶಿಸುವಿಕೆ ಮತ್ತು ಕೈಗೆಟುಕುವ ಸಾಮರ್ಥ್ಯವನ್ನು ಒಳಗೊಂಡಿರುವ ನಾಲ್ಕು-ತುದಿಯ ವಿಧಾನವನ್ನು ಆಧರಿಸಿದೆ. ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ, ನಾವು ದೇಶದಾದ್ಯಂತ ಕ್ಯಾನ್ಸರ್ ಆರೈಕೆ ಮೂಲಸೌಕರ್ಯವನ್ನು ನವೀಕರಿಸುತ್ತಿದ್ದೇವೆ ಎಂದರು.
ಡಾ. ಟಾಟಾ ಟ್ರಸ್ಟ್ನ ಕ್ಯಾನ್ಸರ್ ಕೇರ್ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಸಂಜೀವ್ ಚೋಪ್ರಾ ಮಾತನಾಡಿ, “ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಮತ್ತು ಕೈಗೆಟುಕುವ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ವಿಕಿರಣ ಮತ್ತು ಪರಮಾಣು ಔಷಧ ಕೇಂದ್ರದೊಂದಿಗೆ ಯೆನೆಪೊಯ ವೈದ್ಯಕೀಯ ಆಸ್ಪತ್ರೆಗೆ ಬೆಂಬಲ ನೀಡಿರುವುದು ನಮಗೆ ಸಂತೋಷವಾಗಿದೆ. ಈ ಕ್ಯಾನ್ಸರ್ ಕೇರ್ ಸೆಂಟರ್ನೊಂದಿಗೆ, ಉತ್ತರ ಕರ್ನಾಟಕ ಮತ್ತು ಹತ್ತಿರದ ಪ್ರದೇಶಗಳ ಜನರು ಕ್ಯಾನ್ಸರ್ ಚಿಕಿತ್ಸೆಗಾಗಿ ಇತರೆ ನಗರಗಳಿಗೆ ಪ್ರಯಾಣಿಸಬೇಕಾಗಿಲ್ಲ. ಈ ಕೇಂದ್ರವು ಈ ಪ್ರದೇಶದಲ್ಲಿನ ಕ್ಯಾನ್ಸರ್ ಆರೈಕೆ ಪರಿಸರ ವ್ಯವಸ್ಥೆಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದರು.
ನೂತನ ಆಂಕೋಲಜಿ ಸಂಸ್ಥೆಯ ವಿಶೇಷತೆ ಏನು?:
ಆಂಕೋಲಜಿ ವಿಭಾಗದ ಮುಖ್ಯಸ್ ಡಾ. ಜಲಾಲುದ್ದೀನ್ ಅಕ್ಬರ್ ಮಾತನಾಡಿ, ನೂತನ ಈ ಸಂಸ್ಥೆಯಲ್ಲಿ ರೇಡಿಯೋಥೆರಪಿ ಮತ್ತು ನ್ಯೂಕ್ಲಿಯರ್ ಮೆಡಿಸನ್ ವಿಭಾಗಗಳನ್ನು ಸೇರ್ಪಡೆಗೊಳಿಸಿದ್ದು, ಚಿಕಿತ್ಸಾ ಸೌಲಭ್ಯಗಳನ್ನು ಸಂಪೂರ್ಣವಾಗಿ ನವೀಕರಿಸುತ್ತಿದೆ. ಜೊತೆಗೆ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡಲು ಬೇಕಾದ ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಟಾಟಾ ಟ್ರಸ್ಟ್ ಅನುದಾನ ನೀಡುವ ಮೂಲಕ ತನ್ನ ಸಹಭಾಗಿತ್ವವನ್ನು ನೀಡಿದೆ. ಈ ನೂತನ ಕೇಂದ್ರವೂ ಸುಮಾರು 36,000 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಆರು ಬಹುಮಹಡಿ ಕಟ್ಟಡವನ್ನು ಹೊಂದಿದೆ. ಎರಡು ರೇಡಿಯೋ ಥೆರಪಿ ಬಂಕರ್ಗಳು, ಒಂದು ಬ್ರಾಕಿಥೆರಪಿ ಬಂಕರ್ ಹೊಂದಿದೆ. ಟ್ರೂಭೀಮ್ ರೇಡಿಯೋ ಥೆರಪಿ ಯಂತ್ರವನ್ನು ಕ್ಯಾನ್ಸರ್ಗೆ ಬಳಸಲಾಗುತ್ತಿದೆ. ವಿಕಿರಣ ಚಿಕಿತ್ಸೆಗಳಿಗೆ 6 ಡಿಗ್ರಿ ಸ್ವಾತಂತ್ರ್ಯ (6DoF) ಮಂಚವನ್ನು ಹಾಕಲಾಗಿದ್ದು, PET CT ಸ್ಕ್ಯಾನರ್ ಸೇರಿದಂತೆ ಪ್ರತ್ಯೇಕ ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯವನ್ನು ಹೊಂದಿದೆ. ಇದರ ಜೊತೆಗೆ, ಕಿಮೋಥೆರಪಿಯನ್ನು ನಿರ್ವಹಿಸಲು 10 ಹಾಸಿಗೆಗಳ ಡೇ ಕೇರ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಇಡೀ ಯೋಜನೆಯನ್ನು ಅಲಮೇಲು ಚಾರಿಟೇಬಲ್ ಫೌಂಡೇಶನ್ ಮೂಲಕ ಟಾಟಾ ಟ್ರಸ್ಟ್ಗಳು ಕಾರ್ಯಗತಗೊಳಿಸಿದೆ. ಈ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದ ಆಂಕೊಲಾಜಿಸ್ಟ್ ಗಳ ತಂಡದಿಂದ ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ oncocenter@yenepoya.edu.in/0824 2246000 ಸಂಪರ್ಕಿಸಬಹುದು.