ಬೆಂಗಳೂರು: ಜಂಟಿ ಪೊಲೀಸ್ ಆಯುಕ್ತ (ಸಂಚಾರ)ರವಿಕಾಂತೇಗೌಡ ಅವರ ಮನೆಯಲ್ಲಿ ಮೊಬೈಲ್ ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಮನೆಕೆಲಸದಾಕೆಯನ್ನು ಸಂಜಯನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೊಬೈಲ್ ಸೇರಿದಂತೆ ಇನ್ನಿತರೆ ವಸ್ತುಗಳು ಕಳವಾಗಿದ್ದು ಇದಕ್ಕೆ ಮನೆಕೆಲಸದಾಕೆ ಕಾರಣ ಎಂದು ಆರೋಪಿಸಿ ರವಿಕಾಂತೇಗೌಡ ಮನೆಯ ಕಾರು ಚಾಲಕ ಜಗದೀಶ್ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಂಜಯನಗರ ಪೊಲೀಸರು ಕಳೆದೆರಡು ವರ್ಷಗಳಿಂದ ರವಿಕಾಂತೇಗೌಡ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಅಂಕಿತಾ ಎಂಬಾಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಸಂತ್ ರಾವ್ ಪಾಟೀಲ್ ತಿಳಿಸಿದ್ದಾರೆ.
ಮೊಬೈಲ್ ಇನ್ನಿತರ ಬೆಲೆಬಾಳುವ ವಸ್ತುಗಳೊಂದಿಗೆ ಅಂಕಿತಾ ಪರಾರಿಯಾಗಿದ್ದು ಆಕೆ ಹಾವೇರಿಯಲ್ಲಿರುವ ಸುಳಿವು ಆಧರಿಸಿ ಅಲ್ಲಿಗೆ ತೆರಳಿ ಕರೆತಂದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದರು.