Home ಟಾಪ್ ಸುದ್ದಿಗಳು ಬಲೆಗೆ ಬಿದ್ದ ಬೃಹತ್ ತಿಮಿಂಗಿಲ| ನರಳಾಡುತ್ತಿರುವಾಗಲೇ ಮರಿಗೆ ಜನ್ಮ!

ಬಲೆಗೆ ಬಿದ್ದ ಬೃಹತ್ ತಿಮಿಂಗಿಲ| ನರಳಾಡುತ್ತಿರುವಾಗಲೇ ಮರಿಗೆ ಜನ್ಮ!

ಸವನ್ನಾ: ಕಪ್ಪು ತಿಮಿಂಗಿಲವೊಂದು ಬಲೆಯ ಹಗ್ಗಕ್ಕೆ ಸಿಲುಕಿಕೊಂಡು ನರಳುತ್ತಿರುವಾಗಲೇ ಮರಿಗೆ ಜನ್ಮ ನೀಡಿದ ಘಟನೆ ಜಾರ್ಜಿಯಾ ಕಡಲಿನಲ್ಲಿ ನಡೆದಿದೆ.


ಬಲೆಯಲ್ಲಿ ನರಳುತ್ತಿರುವಾಗಲೇ ಮರಿಗೆ ಜನ್ಮ ನೀಡಿದ ಕಪ್ಪು ತಿಮಿಂಗಿಲದ ವೀಡಿಯೋ ವ್ಯಾಪಕ ವೈರಲಾಗಿದ್ದು, ಸುಮಾರು 20 ಅಡಿ ಉದ್ದದ ಬಲೆಯ ಹಗ್ಗವನ್ನು ಎಳೆಯುತ್ತಲೇ ನವಜಾತ ಮರಿಯ ಜೊತೆ ಸಂಚರಿಸುತ್ತಿರುವ ತಿಮಿಂಗಿಲದ ದೃಶ್ಯ ಪ್ರಾಣಿ ಪ್ರಿಯರ ಮನವನ್ನು ಕಲಕಿದೆ.

ಉತ್ತರ ಅಟ್ಲಾಂಟಿಕ್‌ ನಲ್ಲಿ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ತನಿಯಾದ ಕಪ್ಪು ತಿಮಿಂಗಿಲ(ನಾರ್ಥ್‌ ಅಟ್ಲಾಂಟಿಕ್‌ ರೈಟ್‌ ವೇಲ್ಸ್‌) ಚಳಿಗಾಲದಲ್ಲಿ ಜಾರ್ಜಿಯಾ ಮತ್ತು ಫ್ಲೋರಿಡಾ ಕಡೆಗೆ ಮರಿ ಹಾಕಲು ವಲಸೆ ಬರುತ್ತವೆ. ತಜ್ಞರ ಪ್ರಕಾರ ಇವುಗಳ ಸಂಖ್ಯೆ 350ಕ್ಕಿಂತ ಕಡಿಮೆ.

‘ಜಾರ್ಜಿಯಾದ ಸರೋವರದಲ್ಲಿ ತಾಯಿ ತಿಮಿಂಗಿಲವು ಮರಿಯೊಂದಿಗೆ ಸಾಗುತ್ತಿರುವುದನ್ನು ವೈಮಾನಿಕ ಸಮೀಕ್ಷಾ ತಂಡ ಪತ್ತೆ ಮಾಡಿದೆ. ಮರಿ ತಿಮಿಂಗಿಲವು ಆರೋಗ್ಯವಾಗಿದೆ. ಅದರ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ’ ಎಂದು ಜಾರ್ಜಿಯಾದ ನೈಸರ್ಗಿಕ ಸಂಪನ್ಮೂಲ ವಿಭಾಗದ ವನ್ಯಜೀವಿಗಳ ಜೀವಶಾಸ್ತ್ರಜ್ಞ ಕ್ಲೇ ಜಾರ್ಜ್‌ ಹೇಳಿದ್ದಾರೆ.

https://www.youtube.com/watch?v=qZGBAEthXhE

ಕಳೆದ ಮಾರ್ಚ್‌ನಿಂದ ತಿಮಿಂಗಿಲವು ಬಲೆಯ ಹಗ್ಗವನ್ನು ಎಳೆದಾಡುತ್ತ ಜೀವಿಸುತ್ತಿದೆ. ತಿಮಿಂಗಿಲವು ದಕ್ಷಿಣದತ್ತ ವಲಸೆ ಆರಂಭಿಸುವ ಹೊತ್ತಿಗೆ ಬಲೆಯ ಹಗ್ಗದ ಉದ್ದವನ್ನು ಕಡಿಮೆ ಮಾಡುವಲ್ಲಿ ತಜ್ಞರು ಯಶಸ್ವಿಯಾಗಿದ್ದರು. ಆದರೆ ಹಗ್ಗವನ್ನು ಸಂಪೂರ್ಣವಾಗಿ ಅದರ ಬಾಯಿಯಿಂದ ಬಿಡಿಸಲು ಸಾಧ್ಯವಾಗಿರಲಿಲ್ಲ.

ಹಿಂದೆ ಎಣ್ಣೆಗಾಗಿ ಕಪ್ಪು ತಿಮಿಂಗಿಲಗಳನ್ನು ಬೇಟೆಯಾಡಲಾಗುತ್ತಿತ್ತು. ಈಗ ಮೀನುಗಾರಿಕೆ ಬೋಟ್‌ ಮತ್ತು ಹಡಗುಗಳ ಸಂಚಾರದಿಂದಾಗಿ ಕಪ್ಪು ತಿಮಿಂಗಿಲಗಳ ಸಂತತಿಗೆ ಸಂಚಕಾರ ಬಂದಿದೆ. ಹುಟ್ಟುವ ಮರಿಗಳಿಗಿಂತ ಕೊಲ್ಲಲ್ಪಡುತ್ತಿರುವ ತಿಮಿಂಗಿಲಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಶೇಕಡ 10ರಷ್ಟು ತಿಮಿಂಗಿಲಗಳು ನಾಶವಾಗಿವೆ. ಒಟ್ಟಾರೆ ಕಪ್ಪು ತಿಮಿಂಗಿಲಗಳ ಸಂಖ್ಯೆ 336ಕ್ಕೆ ಇಳಿಕೆಯಾಗಿದೆ

Join Whatsapp
Exit mobile version