Home ಟಾಪ್ ಸುದ್ದಿಗಳು ಜಿಗ್ನೇಶ್ ಮೇವಾನಿ ಸೇರಿ 9 ಮಂದಿಗೆ ಮೂರು ತಿಂಗಳು ಜೈಲು ಶಿಕ್ಷೆ

ಜಿಗ್ನೇಶ್ ಮೇವಾನಿ ಸೇರಿ 9 ಮಂದಿಗೆ ಮೂರು ತಿಂಗಳು ಜೈಲು ಶಿಕ್ಷೆ

ಅಹಮದಾಬಾದ್: 2017 ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರೆ ಒಂಬತ್ತು ಮಂದಿಗೆ ಮೂರು ತಿಂಗಳು ಜೈಲು ಶಿಕ್ಷೆ ಮತ್ತು ತಲಾ 1000 ರೂ. ಗಳ ದಂಡ ವಿಧಿಸಿ ಮೆಹ್ಸಾನಾದ ಸ್ಥಳೀಯ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

2017 ರ ಜುಲೈ 12 ರಂದು ಮೇವಾನಿ ಮತ್ತು ಇತರೆ ಒಂಬತ್ತು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 143 ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಮುಖ್ಯ ನ್ಯಾಯಮೂರ್ತಿ ಜೆ.ಎ. ಪರ್ಮಾರ್ ಆದೇಶ ನೀಡಿದ್ದಾರೆ.

ಸೋಮನಾಥ್ ಜಿಲ್ಲೆಯ ಗಿರ್ ಎಂಬಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ದಲಿತರ ಸ್ಮರಣಾರ್ಥ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್, ಜುಲೈ 12, 2017 ರಂದು ಆಯೋಜಿಸಿದ ಕಾರ್ಯಕ್ರಮದ ಪೊಲೀಸ್ ಅನುಮತಿಗಾಗಿ ಮಂಚ್ ನ ಸಹ ಸಂಚಾಲಕ ಕೌಶಿಕ್ ಪರ್ಮಾರ್ ಅರ್ಜಿ ಸಲ್ಲಿಸಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಕಾರಣ ನೀಡಿ ಸ್ಥಳೀಯಾಡಳಿಯ ಅನುಮತಿ ನಿರಾಕರಿಸಿತ್ತು. ಇದರ ಹೊರತಾಗಿಯೂ ಸಂಘಟಕರು ಅನುಮತಿ ರಹಿತವಾಗಿ ಕಾರ್ಯಕ್ರಮ ನಡೆಸಿದ ಕಾರಣ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಮೇವಾನಿ ಹೊರತಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕಿ ರೇಷ್ಮಾ ಪಟೇಲ್ ಅವರಿಗೂ ಶಿಕ್ಷೆಯಾಗಿದೆ.

ಜೆಎನ್‌ಯು ವಿವಿ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಕೂಡ ಈ ಪ್ರಕರಣ ಆರೋಪಿಗಳಲ್ಲೊಬ್ಬರಾಗಿದ್ದು, ಸತತ ಗೈರು ಹಾಜರಿಯಿಂದಾಗಿ ಅವರ ವಿರುದ್ಧದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ.

Join Whatsapp
Exit mobile version