Home ಟಾಪ್ ಸುದ್ದಿಗಳು ಜಾರ್ಖಂಡ್: ಆದಿವಾಸಿಗೆ ಪೊಲೀಸರಿಂದ ಗಂಭೀರ ಹಲ್ಲೆ; ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ

ಜಾರ್ಖಂಡ್: ಆದಿವಾಸಿಗೆ ಪೊಲೀಸರಿಂದ ಗಂಭೀರ ಹಲ್ಲೆ; ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ

ರಾಂಚಿ: ಜಾರ್ಖಂಡ್ ಮೂಲದ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಮಾವೋವಾದಿಗಳಿಗೆ ನೆರವಾಗಿದ್ದಾರೆ ಎಂಬ ಆರೋಪದಲ್ಲಿ ಲತೇಹತ್ ಜಿಲ್ಲೆಯ ಪೊಲೀಸರು ಗಂಭೀರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ತನಿಖೆಗೆ ಆದೇಶಿಸಿದ್ದಾರೆ. ಬುಡಕಟ್ಟು ಸಮುದಾಯದ ವ್ಯಕ್ತಿಗೆ ಹಲ್ಲೆ ನಡೆಸಿರುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ಅನಿಲ್ ಸಿಂಗ್ ಎಂಬಾತನನ್ನು ಫೆಬ್ರವರಿ 23 ಮತ್ತು 24ರ ಮಧ್ಯರಾತ್ರಿ ಪೊಲೀಸರು ಲಾತೇಹರ್ ಜಿಲ್ಲೆಯಿಂದ ಅಕ್ರಮವಾಗಿ ಬಂಧಿಸಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಮಾನವಹಕ್ಕುಗಳ ಸಂಸ್ಥೆ ಜಾರ್ಖಂಡ್ ಜನಾಧಿಕರ್ ಮಹಾಸಭಾ ಪ್ರಸ್ತಾಪಿಸಿತ್ತು. ಘಟನೆಯ ಕುರಿತು ಪ್ರಯಿಕ್ರಿಯಿಸಿದ ಸಂತ್ರಸ್ತ ಅನಿಲ್ ಸಿಂಗ್, ಮನೆಯಲ್ಲಿ ಮಲಗಿದ್ದ ವೇಳೆ ಪೊಲೀಸರು ಮನೆಗೆ ಅಕ್ರಮ ಪ್ರವೇಶಗೈದು ಬಂಧಿಸಿ ಠಾಣೆಗೆ ಕರೆದೊಯ್ದರು. ಆ ಸಮಯದಲ್ಲಿ ನನ್ನ ಮನೆಯಲ್ಲಿ ಇಬ್ಬರು ಅತಿಥಿಗಳಿದ್ದರು ಮತ್ತು ಅವರನ್ನೂ ಠಾಣೆಗೆ ಬರುವಂತೆ ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಮೇಲೆ ಮಾವೋವಾದಿಗಳಿಗೆ ನೆರವಾದ ಆರೋಪ ಹೊರಿಸಲಾಗಿತ್ತು ಮತ್ತು ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಹೇಮಂತ್ ಸೊರೆನ್ ಟ್ವೀಟ್ ಮಾಡಿದ್ದು, ಜಾರ್ಖಂಡ್ ಪೊಲೀಸರು ಈ ಬಗ್ಗೆ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ವರದಿ ಒಪ್ಪಿಸುವಂತೆ ಆದೇಶಿಸಿದ್ದಾರೆ.

Join Whatsapp
Exit mobile version