ಹಾಸನ: ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ವಾಪಸ್ ಪಡೆಯಬೇಕು ಹಾಗೂ ರಸಗೊಬ್ಬರ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಇಂದು ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿ ಜಮಾವಣೆಗೊಂಡ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು, ಡಿಸಿ ಕಚೇರಿಗೆ ತಲುಪಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಲಿಂಗೇಶ್, ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಧರಣಿ ನಡೆಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಸುರಿದ ವಾಡಿಕೆಗಿಂತಲೂ ಅಧಿಕ ಮಳೆಗೆ ಸುಮಾರು 450ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. 250ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಇದಲ್ಲದೇ ರಸ್ತೆಗಳು ವಾಹನಗಳು, ಸಾರ್ವಜನಿಕರು ಓಡಾಡದ ಸ್ಥಿತಿಗೆ ತಲುಪಿವೆ. ಕಾಫಿ, ಏಲಕ್ಕಿ, ಕಾಳು ಮೆಣಸು ಬೆಳೆಗೆ ಕಂಟಕ ಎದುರಾಗಿದೆ. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿವೆ ಎಂದು ದೂರಿದರು.
ಕೂಡಲೇ ಅತಿವೃಷ್ಟಿ ಹಾನಿ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಹಾಗೆಯೇ ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸಬೇಕು. ಅಗತ್ಯ ದಿನಬಳಕೆ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಕೆಲವು ಕಡೆ ದುರಸ್ತಿ ಮಾಡಿದ್ದ ರಸ್ತೆಗಳು ಕಳಪೆ ಕಾಮಗಾರಿಯಿಂದಾಗಿ ಜೋರು ಮಳೆಗೆ ಹಾಳಾಗಿವೆ. ಕಳೆದ ಎರಡು ವರ್ಷ ಕೊರೊನಾ ಕಾರಣ ನೀಡಿ ಸರ್ಕಾರ ಕೆಲ ತಾಲೂಕು ಹೊರತು ಪಡಿಸಿ ಉಳಿದ ತಾಲೂಕುಗಳಿಗೆ ಸಮರ್ಪಕ ಅನುದಾನ ನೀಡದ ಸರ್ಕಾರ, ಮುಂದೆ ಈ ರೀತಿಯ ತಾರತಮ್ಯ ಮಾಡದೆ ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ಅತಿವೃಷ್ಟಿಗೆ ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಅನೇಕ ಬೆಳೆ ನಾಶವಾಗಿವೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಅಗತ್ಯವಿರುವ ರಸಗೊಬ್ಬರವನ್ನು ಸಮರ್ಪಕವಾಗಿ ನೀಡಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವಿಫಲವಾಗಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು,ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ನೀಡಬೇಕು ಕೋರಿದರು.
ಡಿಸಿ ಕಚೇರಿ ಬಳಿ ನಡೆದ ಧರಣಿಯಲ್ಲಿ ಮಾತನಾಡಿದ ಶಾಸಕ ಲಿಂಗೇಶ್, ರಾಜ್ಯ ಮತ್ತು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹಲವು ರೀತಿಯ ರೀತಿಯ ಭರವಸೆ ನೀಡಿದ್ದವು. ಆದರೀಗ ನುಡಿದಂತೆ ನಡೆದಿಲ್ಲ. ಬದಲಾಗಿ ಎಲ್ಲಾ ರೀತಿಯಲ್ಲೂ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂಥ ಜನವಿರೋಧಿ ಸರ್ಕಾರಗಳನ್ನು ಜನರು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ ಮಾತನಾಡಿ, ಉತ್ತಮ ಮಳೆಯಿಂದಾಗಿ ರೈತರು ಅನೇಕ ಬೆಳೆ ಬೆಳೆದು ಆದಾಯ ಹೊಂದುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಮರ್ಪಕ ಗೊಬ್ಬರ ನೀಡದೆ ಅನ್ಯಾಯ ಮಾಡಿದೆ ಎಂದು ದೂರಿದರು.
ರೈತರು, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದರ ಬದಲು ಜಿಎಸ್‌ಟಿ ಹೇರಿ ತೊಂದರೆ ನೀಡುತ್ತಿವೆ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಹೆಚ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜಿಪಂ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ, ಮುಖಂಡರಾದ ಪರಮ ದೇವರಾಜೇಗೌಡ, ಅಣ್ಣಪ್ಪ, ಜಯರಾಂ, ಸಮೀರ್, ಪ್ರಸಾದ್‌ಗೌಡ, ಶಂಕರ್, ಪ್ರೇಮಮ್ಮ, ನಾಗಮ್ಮ ಮೊದಲಾದವರು ಭಾಗಿಯಾಗಿದ್ದರು.