Home ಟಾಪ್ ಸುದ್ದಿಗಳು ಜೆಡಿಎಸ್ ಗುರಿ 123 ಕ್ಷೇತ್ರ; ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಗುರಿ 123 ಕ್ಷೇತ್ರ; ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಜೆಡಿಎಸ್ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಮಿಷನ್ 123 ಗುರಿ ದಾಟಿ, ಅಧಿಕಾರ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.


ಜೆಡಿಎಸ್ ಅಸ್ಥಿತ್ವದಲ್ಲಿ ಇಲ್ಲ, ಆ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ ಎಂದು ಹೇಳುವವರಿಗೆ ಮಾಜಿ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮಟ್ಟದ ಎರಡು ದಿನಗಳ ಕಾರ್ಯಾಗಾರ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು 150 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಾರೆ. ಅವರಿಗೆ ಎಲ್ಲಿ ಅಭ್ಯರ್ಥಿಗಳು ಇದ್ದಾರೆ. ಇನ್ನೂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸಿಕ್ಕಿಲ್ಲ. ನಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಸಿಗುತ್ತಿರುವ ಉತ್ತಮ ಬೆಂಬಲ ನೋಡಿ ಹಲವರು ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಹೇಳಿದರು.


ನವೆಂಬರ್ 1 ರ ಪಂಚರತ್ನ ಯಾತ್ರೆ ವೇಳೆ 126 ಸಂಭವನೀಯ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದ ಎಚ್ ಡಿಕೆ ಅವರು, ಶಾಸಕ ಜಿ.ಟಿ.ದೇವೇಗೌಡರು ನನ್ನ ಅನುಮತಿ ಪಡೆದು ಇಲ್ಲಿ ಗೈರು ಹಾಜರಾಗಿದ್ದಾರೆ. ಮೈಸೂರು ಸೇರಿದಂತೆ ಇಡೀ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲೂ ಭಿನ್ನಾಭಿಪ್ರಾಯ ಇಲ್ಲ. ಇದೆಲ್ಲ ಕೇವಲ ಊಹಾಪೋಹ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ತೆಲಂಗಾಣದಲ್ಲಿ ಅಲ್ಲಿನ ಸರಕಾರ ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ನೀಡಲಾಗುತ್ತಿದೆ. ದಲಿತರ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗಿದೆ. ಅದೇ ರೀತಿಯ ಹಲವು ವಿಶೇಷ ಕಾರ್ಯಕ್ರಮಗಳನ್ನು ನೀಡಲಾಗಿದೆ. 30 ಸಾವಿರ ಕೋಟಿ ಯೋಜನೆಯನ್ನು ದಲಿತರಿಗೆ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಿ ದಲಿತರ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿದೆ. ಇನ್ನೂ ಕೂಡ ಬಹಳಷ್ಟು ದಲಿತರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಭಾರತ್ ಜೋಡೋ ಯಾತ್ರೆ ಸಂದೇಶ ಕೊಟ್ಟರೋ ಅಥವಾ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೋಡೋ ಸಂದೇಶ ಕೊಟ್ಟರೋ? ಎಂದು ರಾಹುಲ್ ಗಾಂಧಿ ಅವರಿಗೆ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.


ಮೀಸಲಾತಿ ಚರ್ಚೆಗಿಂತ ಪ್ರತಿಯೊಂದು ಕುಟುಂಬ ಸ್ವಾಭಿಮಾನದಿಂದ ಬದುಕುವ ಯೋಜನೆ ರೂಪಿಸುವುದು ನನ್ನ ಉದ್ದೇಶ. ಐದು ಕಾರ್ಯಕ್ರಮಗಳು ಇರುವ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರದಿದ್ದರೆ ನಾನು ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ. ಪಂಚರತ್ನ ಕಾರ್ಯಕ್ರಮ ತಂದು ಜನರು ಸ್ವಾಭಿಮಾನದಿಂದ ಬದುಕು ಸಾಗಿಸುವಂತೆ ಮಾಡುವುದು ನನ್ನ ಉದ್ದೇಶ. ರಾಜ್ಯದ ಜನತೆ 123 ಸ್ಥಾನ ಕೊಡಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಮುಕ್ತ ವಾತಾವರಣ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.


ಮುಳಬಾಗಿಲು ಪಟ್ಟಣದಿಂದ ಪಂಚರತ್ನ ರಥಯಾತ್ರೆ ಆರಂಭ:

ಮುಂಬರುವ ವಿಧಾನಸಭೆ ಚುನಾವಣೆಗೆ ಕೋಲಾರದ ಮುಳಬಾಗಿಲುನಿಂದ ಜೆಡಿಎಸ್ ಪ್ರಚಾರ ಆರಂಭಿಸಲಿದೆ. 1994ರಲ್ಲೂ ಮುಳಬಾಗಿಲುನಿಂದಲೇ ಎಚ್.ಡಿ.ದೇವೇಗೌಡರು ಪ್ರಚಾರ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುಳಬಾಗಿಲುನಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇವೆ. ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸುತ್ತೇವೆ. ಮೈಸೂರಿನಲ್ಲಿ ಜಿ.ಟಿ.ದೇವೆಗೌಡರ ನೇತೃತ್ವದಲ್ಲಿಯೇ ಪಂಚರತ್ನ ಯಾತ್ರೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮಿಷನ್ 123 ಜೆಡಿಎಸ್ ಗುರಿ. ಆದರೆ ಕೆಲವರು ಜೆಡಿಎಸ್ ಗೆ 15 ಅಥವಾ 20 ಇಲ್ಲವೇ 30 ಸೀಟುಗಳು ಬರಬಹುದು ಎಂದು ಕೆಲವರು ಕುಹಕವಾಡುತ್ತಿದ್ದಾರೆ. ಅವರೆಲ್ಲರಿಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ. ಅದಕ್ಕೆ ಮುನ್ನುಡಿಯಾಗಿ ಚಾಮುಂಡೇಶ್ವರಿಯ ಸನ್ನಿಧಾನವಾಗಿರುವ ಮೈಸೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪಕ್ಷದ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಜೆಡಿಎಸ್ ನ 126 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ. ಶೀಘ್ರದಲ್ಲಿಯೇ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕರಾದ ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಕೆ.ಎಂ.ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪ ನಾಯಕ, ಟಿ.ಎಂ.ಶರವಣ, ಮಂಜೇಗೌಡ ಮುಂತಾದವರು ಉಪಸ್ಥಿತರಿದ್ದರು.

Join Whatsapp
Exit mobile version