ಬಾಗಲಕೋಟೆ: ಮಾಧ್ಯಮಗಳ ಮುಂದೆ ಜಯಮೃತ್ಯುಂಜಯ ಸ್ವಾಮೀಜಿಗಳು ನೀಡಿದ ಹೇಳಿಕೆಯನ್ನು ನೋಡಿ ನಮಗೆ ಆಘಾತವಾಗಿದೆ. ಮುಸ್ಲಿಮರು ಈ ದೇಶದಲ್ಲಿ ಹುಟ್ಟಿವದರಲ್ಲ, ಅವರಿಗೆ ಅಲ್ಪಸಂಖ್ಯಾತರೆಂದು ಪರಿಗಣಿಸಿ ಮೀಸಲಾತಿ ನೀಡಲಾಗಿದೆ ಎಂದು ಹೇಳಿರುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ರಾಜ್ಯ ಸಂಚಾಲಕ ಜಬ್ಬಾರ್ ಕಲಬುರ್ಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜವು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟವನ್ನು ಮುಸ್ಲಿಮರು ಯಾವತ್ತೂ ವಿರೋಧಿಸಿಲ್ಲ. ಬದಲಾಗಿ ಕೂಡಲಸಂಗಮದಿಂದ ಪಾದಯಾತ್ರೆ ಕೈಗೊಂಡು ಹುನಗುಂದ ಪಟ್ಟಣ ಪ್ರವೇಶಿಸಿದಾಗ ಇಡೀ ಮುಸ್ಲಿಂ ಸಮಾಜದ ಜನ ಜಯಘೋಷದೊಂದಿಗೆ ಸ್ವಾಗತ ಕೋರಿ ಸನ್ಮಾನ ಮಾಡಿತ್ತು. ಆದರೂ ಸ್ವಾಮೀಜಿಗಳು ಯಾಕೆ ಒಂದು ಧರ್ಮವನ್ನು ದ್ವೇಷ ಮಾಡುವಂತಹ ಹೇಳಿಕೆ ನೀಡಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿಯನ್ನು ಕೊಡುವುದಕ್ಕೆ ಸಂಬಂಧಿಸಿ ರಾಜ್ಯದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಇದೆ. ಆಯೋಗ ಮಾಡಿದ ಶಿಫಾರಸ್ಸನ್ನು ಸರ್ಕಾರದವರು ಪಾಲಿಸುತ್ತಾರೆ. ಹಾಗಾಗಿ ಆಯೋಗದವರು ಇದಕ್ಕೆ ಸಂಬಂಧಿಸಿ ಅಧಿಕೃತವಾಗಿ ಅದನ್ನು ಹೇಳಿದರೆ ನಾವು ಅದನ್ನು ಪ್ರಶ್ನೆ ಮಾಡಬಹುದು ಎಂದರು.
ಸಾಮಾನ್ಯವಾಗಿ ಎಲ್ಲ ಸಮಾಜದ ಸ್ವಾಮೀಜಿಗಳು ಸಮಾಜದ ಎಲ್ಲ ವರ್ಗ ಜಾತಿಯ ಜನರಿಗಾಗಿ ಕೆಲಸ ಮಾಡುತ್ತಾರೆ. ಅದೆ ರೀತಿ ಅವರ ಅಭಿವೃದ್ಧಿಗಾಗಿ ಸಲಹೆ ಸೂಚನೆಯನ್ನು ಕೊಡುತ್ತಾರೆ. ಆದರೆ ಈ ಸ್ವಾಮೀಜಿ ಮೀಸಲಾತಿ ವಿಚಾರದಲ್ಲಿ ಮುಸ್ಲಿಮರನ್ನು ಎಳೆದು ತಂದಿರುವುದು ತುಂಬಾ ನೊವುಂಟು ಮಾಡಿದೆ ಮತ್ತು ಮುಸ್ಲಿಮರ ಮೀಸಲಾತಿ ಪ್ರಶ್ನಿಸಿ ಅದನ್ನು ರದ್ದು ಮಾಡಲು ಹೇಳಿರುವುದು ನಿಜಕ್ಕೂ ಖಂಡನಾರ್ಹವಾಗಿದೆ ಎಂದರು.
ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿರುವುದು ಧರ್ಮದ ಆಧಾರದ ಮೇಲೆ ಅಲ್ಲ, ಸಾಮಾಜಿಕವಾಗಿ ಅವರ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಮೀಸಲಾತಿ ನೀಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕ ಸರ್ಕಾರ 1927ರ ಮೈಸೂರು ಸರ್ಕಾರ ಆಗಿರಬಹುದು, ನಂತರ ಬಂದ ಕರ್ನಾಟಕ ಸರ್ಕಾರ ಆಗಿರಬಹುದು ಅದನ್ನು ಸ್ಪಷ್ಟವಾಗಿ ಬೇರೆ ಬೇರೆ ನೇಮಕಗೊಂಡ ಆಯೋಗಗಳು ಮುಸ್ಲಿಮರು ಸಾಮಾಜಿಕವಾಗಿ ಹಿಂದುಳಿರುವುದಾಗಿ ಹೇಳಿವೆ. 1921ರಲ್ಲಿ ಮೈಸೂರು ಮಹಾರಾಜರು ನೇಮಕ ಮಾಡಿದ ಲೆಸ್ಲಿ ಮಿಲ್ಲರ್ ಆಯೋಗ ಈ ವಿಷಯಕ್ಕೆ ಸಂಬಂಧಿಸಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡಿದೆ. ಮುಸ್ಲಿಮರು ಇತರೆ ಒಬಿಸಿ ಪಂಗಡಗಳಲ್ಲಿ ಅಥವಾ ಗುಂಪಿನಲ್ಲಿ ಬರುತ್ತಿದ್ದು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ ಅವರಿಗೆ ಮೀಸಲಾತಿ ಕೊಡಬೇಕು ಎಂದು ಮಿಲ್ಲರ ಕಮಿಷನ್ ಶಿಫಾರಸ್ಸು ಮಾಡಿದೆ. ಹಾಗೆಯೇ ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗ, ವೆಂಕಟಸ್ವಾಮಿ ಆಯೋಗ ಇರಬಹುದು ಹೀಗೆ ಎಲ್ಲ ಆಯೋಗಗಳು ರಾಜ್ಯ ಸರ್ಕಾರಕ್ಕೆ ಅಧ್ಯಯನ ಮಾಡಿ ಶಿಫಾರಸ್ಸು ಮಾಡಿವೆ. ಹೀಗಿರುವಾಗ ಈ ಮೀಸಲಾತಿಯನ್ನು ಧರ್ಮದ ಆಧಾರದ ಮೇಲೆ ಕೊಟ್ಟಿರುವುದು ಎಂದು ಪಂಚಮಸಾಲಿ ಶ್ರೀಗಳು ವಾದಿಸುವುದು ತಪ್ಪು. ಅವರು ಇದಕ್ಕೆ ಸಂಬಂಧಿಸಿ ಎಲ್ಲ ಆಯೋಗಗಳ ವರದಿಗಳನ್ನು ತರಿಸಿ ಮೊದಲು ಅಧ್ಯಯನ ಮಾಡಲಿ ಅವರಿಗೆ ಸತ್ಯಾಂಶ ಗೊತ್ತಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಒಬಿಸಿ (ಅದರ್ ಬ್ಯಾಕ್ ವರ್ಡ ಕ್ಲಾಸ್) ಇದರಲ್ಲಿ ಒಟ್ಟು ನೀಡಿದ ಮೀಸಲಾತಿ ಎಲ್ಲ ಹಿಂದುಳಿದ ಜಾತಿಗಳಿಗೆ ನೀಡಿದ್ದು ಅದರಲ್ಲಿ ಪರಸ್ಪರ ಅವಕಾಶಗಳನ್ನು ಕಬಳಿಸಬಾರದು ಎಂಬ ಕಾರಣಕ್ಕೆ ಪ್ರವರ್ಗಗಳನ್ನು ಸೃಜಿಸಲಾಗಿದೆ. ಅದರಲ್ಲಿ 2ಎ, 2ಬಿ, 3ಎ, 3ಬಿ ಎಂದು ನಿಗದಿಪಡಿಸಲಾಗಿದೆ. ಇದರಲ್ಲಿ ಒಕ್ಕಲಿಗರಿಗೆ 4% ಮುಸ್ಲಿಮರಿಗೆ 4% ಇತರೆ ಬೇರೆ ಬೇರೆ ಜಾತಿಗಳನ್ನು ವರ್ಗಿಕರಿಸಿ ಮೀಸಲಾತಿ ನೀಡಲಾಗಿದೆ. ಇದೆಲ್ಲವನ್ನು ಹಿಂದುಳಿದ ವರ್ಗಗಳ ಆಯೋಗದವರು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದು ಇದನ್ನು ಧರ್ಮದ ಆಧಾರದ ಮೇಲೆ ಮಾಡಲಾಗಿದೆ ಎಂದು ಹೇಳುವದು ತಪ್ಪಾಗುತ್ತದೆ. ಹೀಗೆ ಮಾಧ್ಯಮಗಳ ಮುಂದೆ ಅಪಪ್ರಚಾರ ಮಾಡುವುದು ಖಂಡಿತವಾಗಿ ಸರಿ ಅಲ್ಲದ ವಿಚಾರ, ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಜಬ್ಬಾರ್ ಕಲಬುರ್ಗಿ ಹೇಳಿದರು.
ಮುಸ್ಲಿಮರು ದಲಿತರಿಗೆ ಸಮಾನವಾಗಿ ಹಿಂದುಳಿದಿದ್ದು ಶೈಕ್ಷಣಿಕವಾಗಿಯೂ ಸಹ ಹಿಂದುಳಿದಿದ್ದಾರೆ. ಇವರಿಗೆ ಮೀಸಲಾತಿ ಮೂಲಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಂದೆ ಬಂದು ಒಂದು ಸಮಾಜವನ್ನು ಒಂದು ರಾಷ್ಟ್ರವನ್ನು ಉತ್ತಮ ರೀತಿಯಲ್ಲಿ ನಿರ್ಮಾಣವಾಗಬೇಕು ಎಂದು ರಾಜ್ಯ ಸರ್ಕಾರ ಬಯಸಿ ಈ ಮೀಸಲಾತಿಯನ್ನು ನೀಡಿದೆ. ಸಾಮಾಜಿಕ ನ್ಯಾಯವನ್ನು ಪರಿಗಣಿಸಿ ಮುಸ್ಲಿಮರಿಗೆ ನೀಡಿದ ಶೇ. 4% ಮೀಸಲಾತಿಯು ಖಂಡಿತವಾಗಿಯೂ ಮುಸ್ಲಿಂ ಸಮುದಾಯಕ್ಕೆ ಸಾಲುವುದಿಲ್ಲ. ಇದನ್ನು ಶೇ 8% ಕ್ಕೆ ಏರಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಈಗಾಗಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ರವರಿಗೆ ಭೇಟಿಯಾಗಿ ಚರ್ಚಿಸಿ ಮನವಿಯನ್ನು ಮಾಡಿದೆ. ಈ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಜಯಪ್ರಕಾಶ ಹೆಗ್ಡೆಯವರು ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರು ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತ ರೀತಿಯಿಂದ ಈ ವಿಷಯವನ್ನು ಮನಗಾಣ ಬೇಕಾಗಿ ನಾವು ಸಮುದಾಯದವರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಯಾರೊ ಒಬ್ಬರು ಮುಸ್ಲಿಮರ ಬಗ್ಗೆ ಈ ರೀತಿ ಹೇಳಿಕೆ ನೀಡುವುದರಿಂದ ಪರಸ್ಪರ ಸಮಾಜ, ಸಮುದಾಯಗಳ ನಡುವೆ ದ್ವೇಷ, ವೈಷಮ್ಯ ಬಿತ್ತುವ ಕೆಲಸವನ್ನಾಗಲಿ ದಯವಿಟ್ಟು ಮಾಡದೆ ಶ್ರೀಗಳು ನೀಡಿರುವ ಹೇಳಿಕೆಯನ್ನು ಸ್ವಯಂ ಪ್ರೇರಿತವಾಗಿ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೆಹಬೂಬ ಸರಕಾವಸ, ಇಲಕಲ್ ಯೂತ್ಸ್ ಕ್ಲಬ್ ಅಧ್ಯಕ್ಷ ರಿಯಾಝ್ ಮುಲ್ಲಾ, ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ಎ.ಐ. ಜಮಾದಾರ, ಮುಖಂಡರಾದ ಎ.ಎ.ದಂಡಿಯಾ ಉಪಸ್ಥಿತರಿದ್ದರು.