ನವದೆಹಲಿ: ದಿಲ್ಲಿಯಲ್ಲಿ ಹೋಳಿ ಆಚರಣೆ ವೇಳೆ ಜಪಾನಿನ ಪ್ರವಾಸಿ ಮಹಿಳೆಯನ್ನು ಎಳೆದಾಡಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಸಂಬಂಧ ಮೂವರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಪಾನ್ ಪ್ರವಾಸಿಯು ಕೇಂದ್ರೀಯ ದಿಲ್ಲಿಯ ಪಹರ್ ಗಂಜ್ ಪ್ರದೇಶದಲ್ಲಿ ಉಳಿದುಕೊಂಡಿದ್ದಳು. ಕಿರುಕುಳ ನೀಡಿದ ಮೂವರಲ್ಲಿ ಒಬ್ಬ ಅಪ್ರಾಪ್ತ ಕೂಡ ಅದೇ ಪ್ರದೇಶದವ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಕುಳಕ್ಕೊಳಗಾದ ಯುವತಿ ಯಾವುದೇ ದೂರು ನೀಡದೆ ನಿನ್ನೆಯೇ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ದೈಹಿಕವಾಗಿ ಮಾನಸಿಕವಾಗಿ ನಾನು ಆರೋಗ್ಯದಿಂದ ಇದ್ದೇನೆ ಎಂದು ಆ ಯುವತಿ ಟ್ವೀಟ್ ಮಾಡಿದ್ದಾರೆ ಎಂದೂ ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಈ ಕಿರುಕುಳದ ವೀಡಿಯೋ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬಹಳಷ್ಟು ಮಂದಿ ಒತ್ತಾಯಿಸಿದ್ದಾರೆ.
ಆ ಮೂವರೂ ಆ ಯುವತಿಯನ್ನು ಎಳೆಯುತ್ತ ಹೋಳಿ ಹೈ ಎಂದು ಕೂಗುತ್ತ ಆಕೆಗೆ ಇಷ್ಟವಿಲ್ಲದಿದ್ದರೂ ಬಣ್ಣ ಎರಚಿ ಕಿರುಕುಳ ನೀಡಿರುವುದು ಆ ವೀಡಿಯೋದಲ್ಲಿ ಕಂಡು ಬಂದಿದೆ.
ಒಬ್ಬ ಹುಡುಗ ಕೂಡ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆಯುವುದು ಕಂಡುಬಂದಿದೆ. ಆಕೆ ಒಬ್ಬನ ಕಪಾಳಕ್ಕೆ ಬಾರಿಸಿದರೂ ಕಿರುಕುಳ ಮುಂದುವರಿದಿತ್ತು, ಕೊನೆಗೂ ಆ ಯುವತಿ ಬಿಡಿಸಿಕೊಂಡು ಅಲ್ಲಿಂದ ಹೋದುದು ವೀಡಿಯೋದಲ್ಲಿ ಸೆರೆಯಾಗಿದೆ.
ಆ ಯುವತಿಯನ್ನು ಗುರುತಿಸಲಾಗದಷ್ಟು ಆಕೆಯ ಮೇಲೆ ಬಣ್ಣ ಎರಚಿ ಅಸಹ್ಯ ಮೆರೆದಿದ್ದರು.
ಸ್ಥಳೀಯ ತನಿಖಾ ಸಂಸ್ಥೆಗಳು ಆರೋಪಿಗಳನ್ನು ಗುರುತಿಸಿರುವುದಾಗಿಯೂ, ಜಪಾನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.