Home ಕರಾವಳಿ ಉಪ್ಪಿನಂಗಡಿ ಮೂಲದ ಜೈಬುನ್ನಿಸಾ ನಿಗೂಢ ಸಾವು ಪ್ರಕರಣ : ಅಪರಾಧಿ ರವಿಗೆ 2 ವರ್ಷ ಕಠಿಣ...

ಉಪ್ಪಿನಂಗಡಿ ಮೂಲದ ಜೈಬುನ್ನಿಸಾ ನಿಗೂಢ ಸಾವು ಪ್ರಕರಣ : ಅಪರಾಧಿ ರವಿಗೆ 2 ವರ್ಷ ಕಠಿಣ ಸಜೆ

ಮಂಡ್ಯ: ಕೆ.ಆರ್. ಪೇಟೆಯಲ್ಲಿರುವ ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಉಪ್ಪಿನಂಗಡಿ ಮೂಲದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ನ್ಯಾಯಾಲಯವು 2ವರ್ಷ ಕಠಿಣ ಸಜೆ ವಿಧಿಸಿ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ 2ಲಕ್ಷ ಪರಿಹಾರವನ್ನೂ ಘೋಷಿಸಿದೆ.

ಘಟನೆ ಹಿನ್ನೆಲೆ…

2018ರ ಜ.24ರಂದು ವಸತಿ ಶಾಲೆಯ ದೈಹಿಕ ಶಿಕ್ಷಕ ರವಿ ಎಂಬಾತನ ದೌರ್ಜನ್ಯದ ಬಗ್ಗೆ ದೂರು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಮೊಹಮ್ಮದ್ ಇಬ್ರಾಹಿಂ ಮತ್ತು ಜುಬೈದಾ ದಂಪತಿಯ ಪುತ್ರಿ ಎಂಟನೇ ತರಗತಿ ವಿದ್ಯಾರ್ಥಿನಿ ಝೈಬುನ್ನಿಸಾ (ಸಫ್ರೀನಾ) ಅದೇ ದಿನ ನಿಗೂಢವಾಗಿ ಮೃತಪಟ್ಟಿದ್ದರು.

ವಿದ್ಯಾರ್ಥಿನಿ ಸಾವಿಗೂ ಮುನ್ನ 4:30ರ ಸುಮಾರಿಗೆ ತನ್ನ ಸ್ನೇಹಿತೆಯ ಮೊಬೈಲ್ ಮೂಲಕ ತನ್ನ ತಾಯಿಯನ್ನು ಸಂಪರ್ಕಿಸಿ ದೌರ್ಜನ್ಯ ಎಸಗಿದ ಶಿಕ್ಷಕ ರವಿ ವಿರುದ್ಧ ದೂರು ನೀಡಿದ್ದಳು. ಗಣರಾಜ್ಯೋತ್ಸವ ಪರೇಡ್ ನ ಪೂರ್ವಾಭ್ಯಾಸದ ವೇಳೆ ಝೈಬುನ್ನಿಸಾ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಆರೋಪಿಸಿ ರವಿ ಇತರ ವಿದ್ಯಾರ್ಥಿಗಳ ಮುಂದೆ ಝೈಬುನ್ನಿಸ್ಸಾ ಅವರನ್ನು ಅವಮಾನಿಸಿ, ನಿಂದಿಸಿ, ಥಳಿಸಿದ್ದನು. ತನ್ನ ತಾಯಿಯೊಂದಿಗಿನ ತನ್ನ ಕೊನೆಯ ಮೊಬೈಲ್ ಸಂಭಾಷಣೆಯಲ್ಲಿ, ಕಳೆದ ಎರಡು ತಿಂಗಳುಗಳಿಂದ ಅದೇ ಶಿಕ್ಷಕ ತನ್ನನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಳು. ಬಟ್ಟೆ ಬಿಚ್ಚಿ ಥಳಿಸುವ ಬೆದರಿಕೆ ಹಾಕಿದ್ದಾಗಿಯೂ ಆಕೆ ಬಹಿರಂಗಪಡಿಸಿದ್ದಾಳೆ.  ಬೇರೆ ಶಾಲೆಗೆ ಸೇರಿಸುವ ಮೂಲಕ ರಕ್ಷಿಸುವಂತೆಯೂ ಬಾಲಕಿ ತನ್ನ ತಾಯಿಯ ಬಳಿ ಮನವಿ ಮಾಡಿದ್ದಳು.

ಒಂದು ಗಂಟೆಯ ನಂತರ, ಸಂಜೆ 5:30 ರ ಸುಮಾರಿಗೆ ಝೈಬುನ್ನಿಸಾ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿದ್ದ ಮೃತದೇಹವನ್ನು ಗಮನಿಸಿದ ಆಕೆಯ ಸ್ನೇಹಿತರು ತಕ್ಷಣ ಶಿಕ್ಷಕರಿಗೆ ಮಾಹಿತಿ ನೀಡಿದ್ದು, ರವಿ ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜೈಬುನ್ನಿಸಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ವೈದ್ಯರು ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು.

ಸಂತ್ರಸ್ತೆಗೆ ನ್ಯಾಯ ಒದಗಿಸಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸಲಾಗಿತ್ತು.

Join Whatsapp
Exit mobile version