ಬೆಂಗಳೂರು: ನಗರದ ಕೋರಮಂಗಲದಲ್ಲಿರುವ MUDPIPE ಕೆಫೆಯಲ್ಲಿ ಸ್ಫೋಟಗೊಂಡಿದ್ದು ಗ್ಯಾಸ್ ಸಿಲಿಂಡರೇ ಹೊರತು ಬಾಂಬ್ ಅಲ್ಲ ಎಂದು ಕರ್ನಾಟಕ ಪೊಲೀಸ್ ಇಲಾಖೆಯ ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟನೆ ನೀಡಿದೆ.
ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ತರಹದ ಸುದ್ದಿಗಳು ಹರಿದಾಡಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡ ಬೆಂಗಳೂರಲ್ಲಿರುವಾಗ ಸ್ಫೋಟ ಸಂಭವಿಸಿದೆ, ಭಾರತ ಸೇಫ್ ಅಲ್ಲ, ಪಾಕ್ ಕ್ರಿಕೆಟ್ ಆಟಗಾರರ ಸುರಕ್ಷತೆಯ ಬಗ್ಗೆ ಪಾಕಿಸ್ತಾನ ಕಾಳಜಿ ವಹಿಸಬೇಕು ಎಂದು ಕೆಲವು ಪಾಕಿಸ್ತಾನಿಯರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್’ಗಳು ಹರಿದಾಡಿತ್ತು.
ಈ ಬಗ್ಗೆ ಪೊಲೀಸರ ತಂಡ ಫ್ಯಾಕ್ಟ್ ಚೆಕ್ ನಡೆಸಿದ್ದು, ಈ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಬೆಂಗಳೂರಿನ ಕೋರಮಂಗಲದ ರೂಫ್ ಟಾಪ್’ನಲ್ಲಿರುವ MUDPIPE ಕೆಫೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವಂತೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, NDRF, ಬೆಂಗಳೂರು ನಗರ ಪೊಲೀಸರು ಮತ್ತು ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿಗಳಿಂದ ಜನರು ಭಯಭೀತರಾಗಬೇಡಿ, ಇಂತಹ ದಾರಿ ತಪ್ಪಿಸುವ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಎಂದು ಪೊಲಿಸರು ಮನವಿ ಮಾಡಿದ್ದಾರೆ.