ಹೈದರಾಬಾದ್: ನಟ ರಾಮ್ ಚರಣ್ ಅಭಿನಯದ ʻಗೇಮ್ ಚೇಂಜರ್ʼ ಸೇರಿದಂತೆ ಹಿಟ್ ಸಿನಿಮಾಗಳ ನಿರ್ಮಾಪಕ ದಿಲ್ ರಾಜು ಅವರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ಕೊಟ್ಟಿದೆ.
ಒಟ್ಟು 55 ತಂಡಗಳು ನಿರ್ಮಾಪಕ ದಿಲ್ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ. ಹೈದರಾಬಾದ್ ನ ಜೂಬ್ಲಿಹಿಲ್ಸ್, ಬಂಜಾರಹಿಲ್ಸ್‌ನಲ್ಲಿರುವ ನಿವಾಸಗಳ ಮೇಲೆ, ದಿಲ್ ರಾಜು ಸಹೋದರ ಶಿರೀಷ್, ಪುತ್ರಿ ಹನ್ಸಿತ ರೆಡ್ಡಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಇತ್ತೀಚೆಗಷ್ಟೇ ದೊಡ್ಡ ಬಜೆಟ್ ಸಿನಿಮಾ ʻಗೇಮ್ ಚೇಂಜರ್ʼ ನಿರ್ಮಿಸಿದ್ದರು. ಇದು ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದೇ ಹೊತ್ತಿಗೆ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ʻಸಂಕ್ರಾಂತಿಕಿ ವಸ್ತುನ್ನಾಂʼ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಐಟಿ ಅಧಿಕಾರಿಗಳು ನಿರ್ಮಾಪಕರಿಗೆ ಶಾಕ್ ಕೊಟ್ಟಿದ್ದಾರೆ.