Home ಟಾಪ್ ಸುದ್ದಿಗಳು ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ: ಮಲ್ಲಿಕಾರ್ಜುನ ಖರ್ಗೆ

ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ: ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ: ‘ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಇರದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯದ ನಂತರದಲ್ಲಿ ಜವಾಹರಲಾಲ್ ನೆಹರು ಮತ್ತು ಅಂಬೇಡ್ಕರ್ ಸಂವಿಧಾನ ನೀಡಿದರು. ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.


ಸುವರ್ಣ ವಿಧಾನಸೌಧ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಾಂಧಿ ಪ್ರತಿಮೆಯನ್ನು ಮಂಗಳವಾರ ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಗಾಂಧೀಜಿ ತಮ್ಮ ಬದುಕಿನಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಈಗ ಸೌಧದ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪನೆ ಮೂಲಕ ಬೆಳಗಾವಿಗೆ ಮಾತ್ರವಲ್ಲ; ಇಡೀ ರಾಜ್ಯಕ್ಕೆ ಗೌರವ ತರುವ ಕೆಲಸವಾಗಿದೆ. ದೇಶಕ್ಕೆ ಗಾಂಧಿ ಮಾಡಿರುವ ಸಾಧನೆಗಳು, ತ್ಯಾಗಗಳು ಮತ್ತು ಅವರ ಕೊಡುಗೆಗಳ ಬಗ್ಗೆ ಮಾತನಾಡಲು ನಾವು ಹೆಚ್ಚು ಸಮಯ ನೀಡಬೇಕಿದೆ’ ಎಂದರು.

‘ಇಂದು ಜಗತ್ತಿನಾದ್ಯಂತ ನಾಯಕರು ಮಹಾತ್ಮ ಗಾಂಧಿ ಅವರ ಕೊಡುಗೆಗಳನ್ನು ಸ್ಮರಿಸುತ್ತಿದ್ದಾರೆ. ನಮ್ಮ ಸಂವಿಧಾನ ಮತ್ತು ಅದರ ಜವಾಬ್ದಾರಿಗಳನ್ನು ಪ್ರತಿಯೊಬ್ಬರೂ ರಕ್ಷಿಸುವ ಕೆಲಸವಾಗಬೇಕಿದೆ’ ಎಂದು ಹೇಳಿದರು.

‘ಬೆಳಗಾವಿಯ ಅಧಿವೇಶನದಲ್ಲಿ ಗಾಂಧಿ ಅವರು, ಮಹಿಳಾ ಸಬಲೀಕರಣ, ಅಸ್ಪೃಶ್ಯತೆ ನಿವಾರಣೆಯಂಥ ಸಂದೇಶಗಳನ್ನು ನೀಡಿದ್ದರು. ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕು ತೋರಿದ್ದರು. ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸ್ಥಳದಲ್ಲೇ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ವಿಸ್ತೃತ ಸಭೆ ನಡೆಸಿದ್ದೆವು. ಈಗ ಬೆಳಗಾವಿಯಲ್ಲೇ ಪ್ರತಿಮೆ ಅನಾವರಣಗೊಳಿಸುತ್ತಿರುವುದು ಖುಷಿ ತಂದಿದೆ’ ಎಂದು ಹೇಳಿದರು.

‘ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಬಯಸುತ್ತಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಇಬ್ಬರು ಮಕ್ಕಳೊಂದಿಗೆ ಮಹಾತ್ಮ ಗಾಂಧಿ ನಿಂತಿರುವ ಚಿತ್ರ ಇಷ್ಟಪಟ್ಟಿದ್ದಾರೆ. ಅಂಥದ್ದೇ ಪ್ರತಿಮೆಯನ್ನು ಕಲಬುರಗಿಯಲ್ಲಿ ಸಹ ಪ್ರತಿಷ್ಠಾಪಿಸಲಾಗುವುದು’ ಎಂದರು.

Join Whatsapp
Exit mobile version