ನೆಲಕಚ್ಚಿಹೋಗಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಹೊಸದಾಗಿ ಕಟ್ಟಬೇಕಾಗಿದೆ. (ನಮ್ಮ ದೇಶದ ರಾಜಕೀಯ ವ್ಯವಸ್ಥೆ ಬಹುಪಕ್ಷಗಳ ಆಧಾರಿತವಾಗಿರುವುದರಿಂದ) ಅದು ತನ್ನ ಸೈದ್ಧಾಂತಿಕ ನಿಲುವುಗಳನ್ನು ಮತ್ತೆ ಮತ್ತೆ ಪರಾಮರ್ಶೆ ಮಾಡಿಕೊಳ್ಳಬೇಕು. ಬದಲಾದ ದಿನಮಾನಗಳಿಗೆ ತಕ್ಕಂತೆ ತನ್ನ ರಾಜಕೀಯ ನೀತಿ, ತಂತ್ರಗಳನ್ನು, ಸಂಘಟನಾ ಸ್ವರೂಪವನ್ನು ಅಳವಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ಕಾಂಗ್ರೆಸ್ ಪಳೆಯುಳಿಕೆಯಾಗಿಯೂ ಉಳಿದಿರಲಾರದು. ಈ ಮಾತನ್ನು ನಾನು ಕಳೆದ ಐದು ವರ್ಷದ ಹಿಂದೆಯೇ ಹೇಳಿದ್ದೆ. ಈಗಲೂ ನನ್ನದೂ ಇದೇ ಅಭಿಪ್ರಾಯ.
ಹಾಗಾದರೆ ಈ ಪಕ್ಷ ಇಷ್ಟೊಂದು ದೋಷ, ದುಃಸ್ಥಿತಿಗೆ ಕುಸಿದಿದ್ದಾದರೂ ಹೇಗೆ? ಯಾರು ಕಾರಣ?. ಪ್ರತಿ ಚುನಾವಣೆ ಸಂದರ್ಭದಲ್ಲಿ ಪಕ್ಷ ಸೋತಾಗಲೆಲ್ಲಾ ಅದರ ಹೊಣೆಯನ್ನು ಸೋನಿಯಾ ಗಾಂಧಿ,ರಾಹುಲ್ ಗಾಂಧಿ ತಲೆಗೆ ಕಟ್ಟಿ ಬಿಡಲಾಗುತ್ತದೆ. ತಾಯಿ -ಮಗನನ್ನು ಸೋಲಿನ ಕಟಕಟೆಗೆ ತಂದು ನಿಲ್ಲಿಸಲಾಗುತ್ತದೆ. ಮಹಾರಾಣಿ,ರಾಜಕುವರನನ್ನು ದೂರವಿಡಬೇಕೆಂಬ ಕೂಗುಗಳು ಕೇಳಿಬರುತ್ತಿರುತ್ತವೆ. ಅವರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂಬ ಘೋಷಣೆ ಕೂಡ ಮಾಡಲಾಗುತ್ತದೆ. ಅದು ಅವರದ್ದೆ ಪಕ್ಷದವರಿಂದ.
ಮೂರ್ನಾಲ್ಕು ದಶಕಗಳ ಕಾಲ ಇದೇ ಪಕ್ಷದ ಬಲದಲ್ಲಿ ಅಧಿಕಾರ, ಸ್ಥಾನ-ಮಾನ ಅನುಭವಿಸಿದ ತಲೆಯಾಳುಗಳು ಉರಿವ ಮನೆಯ ಗಳ ಇರಿಯತೊಡಗಿದ್ದಾರೆ. ಕಾಂಗ್ರೇಸ್ ನ ಮುಂಚೂಣಿ ನಾಯಕ ಗುಲಾಂ ನಬಿ ಆಜಾದ್ ಅವರ ಸ್ನೇಹ, ತ್ಯಾಗ , ರಾಜಕೀಯ ಬದ್ದತೆ ನೆನೆದು ಸಂಸತ್ ನಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಗದ್ಗದಿತರಾಗಿ ಅಭಿನಂದಿಸುತ್ತಾರೆ. ಇದೊಂದು ಉದಾಹರಣೆ ಅಷ್ಟೆ. ಐಟಿ, ಇಡಿ ರೈಡಿನ ಭಯದಲ್ಲಿ ಬಿಲ ಹೊಕ್ಕ ಭ್ರಷ್ಟ ಕಾಂಗ್ರೆಸ್ಸಿಗರೆ ಎದುರಾಳಿಗಳಿಂದ ಸುಫಾರಿ ಪಡೆದ ಮನೆಮುರುಕರಂತೆ ಕಾಣಿಸುತ್ತಿದ್ದಾರೆ.
ಸೋನಿಯಾ, ರಾಹುಲ್, ಪ್ರಿಯಾಂಕಾ ಅವರು ಬೀದಿಯಲ್ಲಿ ಬಿಜೆಪಿಯ ಜನವಿರೋಧಿ ಆಡಳಿತವನ್ನು ಖಂಡ- ತುಂಡವಾಗಿ ಖಂಡಿಸುತ್ತಾ ಹೋರಾಡುವಾಗ ಕಾಂಗ್ರೆಸ್ ನ ಸೋಕಾಲ್ಡ್ ಹಿರಿಯ ನಾಯಕರು ದಿವ್ಯ ಮೌನವನ್ನು ಅದೇ ಕಾಲಕ್ಕೆ ಸೋನಿಯಾ, ರಾಹುಲ್ ವಿರುದ್ಧ ಬಂಡಾಯವನ್ನು ಸಾರುತ್ತಾರೆ. ಯುದ್ಧ ಕಾಲದಲ್ಲಿ ತಮ್ಮದೇ ಸೈನ್ಯದ ಸ್ಥೈರ್ಯ ಕುಸಿಯಲು ಇಷ್ಟು ಸಾಕಲ್ಲವೆ?
ಅದಿರಲಿ, ಇಂದು ದೇಶವನ್ನು ಸಾರಾಸಗಟಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಮೋದಿ ( ಬಿಜೆಪಿ) ಪ್ರತಿ ಹಂತದಲ್ಲೂ ವಿಜಯಿಯಾಗುತ್ತಿದ್ದಾರೆ. ಭಾರತದ ಮಾಧ್ಯಮಗಳು ಮೋದಿ ಮೇನಿಯಾವನ್ನೆ ಸೃಷ್ಟಿಸುತ್ತಾ ಜನರನ್ನು ಭ್ರಮೆಯಲ್ಲಿ ಮುಳುಗಿಸಿಬಿಟ್ಟಿವೆ.
ಮೋದಿ ಈ ದೇಶವನ್ನು ಹಿಂಸೆಯಿಂದ (ಗುಜರಾತ್), ಸುಳ್ಳುಗಳಿಂದ, ಭಯಸೃಷ್ಟಿಯಿಂದ ಗೆಲ್ಲುತ್ತಿದ್ದಾರೆ ಎಂಬುದಕ್ಕೆ ಕಳೆದ ಇಪ್ಪತ್ತು ವರ್ಷಗಳ ಇತಿಹಾಸವಷ್ಟೆ ಸಾಕು.
ಓರ್ವ ವಿಫಲ ನಾಯಕ ( ಸರ್ಕಾರ) ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸುಳ್ಳು, ಹಿಂಸೆ- ಭಯವನ್ನು ಅವಲಂಬಿಸಿರುತ್ತಾನೆ.
ಭಾರತದಲ್ಲಿ ಈಗ ನಡೆಯುತ್ತಿರುವುದು ಇದೇ.
ತನ್ನ ಪದಾಡಂಭರಗಳಿಂದಲೂ, ಆಂಗಿಕ ಅಭಿನಯದಿಂದಲೂ ವರ್ಣರಂಜಿತ ಸುಳ್ಳುಗಳಿಂದ ಜನರನ್ನು ರಂಜಿಸುವ ನಾಯಕರು ಬೇಕಾಗಿದ್ದಾರೆ, ಜನಾಂಗೀಯ ದ್ವೇಷ ಕಾರುತ್ತಾ ಸಮುದಾಯನ್ನು ಹಿಂಸೆಗೆ ಉದ್ದೀಪನಗೊಳಿಸುವವನು ಅಪ್ರತಿಮ ನಾಯಕನಂತೆ ಕಾಣಿಸುತ್ತಾನೆ.
ಗಂಗೆಯಲಿ ಮಿಂದು ದೇಹ ತುಂಬೆಲ್ಲಾ ಗಂಧ, ವಿಭೂತಿ ಬಳಿದುಕೊಂಡು ಢಮರುಗ ಬಾರಿಸುವ ಪ್ರಧಾನಿಯೇ ಕಾಲಭೈರವರೂಪಿಯಾಗಿ ಪೂಜಿಸಲ್ಪಡುತ್ತಾನೆ. ಹೋದಕಡೆಗೆಲ್ಲಾ ದೇಶಾವರಿ ವೇಷ, ಭಾಷೆಗಳೂ, ಮತ್ತದೆ ಸುಳ್ಳು ಭಾಷಣಗಳು ಮುಗಿಯುವುದಿಲ್ಲ.
ರಾಹುಲ್ ಗಾಂಧಿ ಗೆ ಇಂತಹ ಯಾವ ಎಲಿಮೆಂಟ್ಸ್ ಗಳೂ ಇಲ್ಲ. ಜನರನ್ನು ಅವರ ಭಾಷಣ ರಂಜಿಸುವುದಿಲ್ಲ. ಉನ್ಮತ್ತಿಸುವುದಿಲ್ಲ. ಸತ್ಯವನ್ನು ಹೇಳಬೇಕಾದಾಗ ಅಬ್ಬರಿಸಬೇಕಾಗಿಲ್ಲ. ಆದರೆ ಸುಳ್ಳುಗಳಿಂದ ಜನರನ್ನು ನಂಬಿಸಲು ಬಹುರೂಪಗಳನ್ನು ಧರಿಸಬೇಕಾಗುತ್ತದೆ. ಇಂತಹ ಹಗಲು ವೇಷವಿಲ್ಲದ ಕಾರಣವೇ ಅವರದ್ದೇ ಪಕ್ಷದ ‘ದಂಡ’ನಾಯಕರಿಗೂ ರಾಹುಲ್ ಪಪ್ಪು ಆಗಿ ಕಾಣಿಸುತ್ತಾರೆ. ಸಂಸತ್ತಿನ ಒಳಗೆ, ಹೊರಗೆ ಅವರ ಮಾತುಗಳು, ಹೋರಾಟಗಳು ಸಪ್ಪೆಯಾಗಿ ಕಾಣುತ್ತವೆ.
ನಾಯಕನಾದವನಿಗೆ ದೊಡ್ಡ ಗಂಟಲಿರಬೇಕು, (ಆತ ಪ್ರೇಯಸಿಯೊಂದಿಗೆ ಸರಸವಾಡುವಾಗಲೂ ಅಬ್ಬರಿಸಬೇಕು!) ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳುಗಳ ವೈಭವೀಕರಿಸಬೇಕು. ಧರ್ಮ -ಜಾತಿಯನ್ನು ಬಗೆಯಬೇಕು. ಹೋದ ಕಡೆ, ಬಂದಕಡೆ ದುಬಾರಿ ಬಣ್ಣದ ಬಟ್ಟೆ, ವೇಷ ತೊಟ್ಟು ಡಾಂಭಿಕ ನಾಯಕತ್ವ ಪ್ರದರ್ಶಿಸಬೇಕು. ಜನಸಮುಯದಾಯಗಳ ನಡುವೆ ಭಿನ್ನ – ಭೇದವ ಬಿತ್ತಿ ಹಿಂಸೆಯನ್ನು ಪ್ರಚೋದಿಸಬೇಕು. ತನ್ನ ಆಡಳಿತದ ವಿರುದ್ಧದ ಅಭಿಪ್ರಾಯ, ಪ್ರಶ್ನೆಗಳನ್ನು, ಹೋರಾಟಗಳನ್ನು ದೇಶದ್ರೋಹದ ಕಟಕಟೆಗೆ ಕಟ್ಟಿ ತರಬೇಕು,( ಸಾಧ್ಯವಾದರೆ ಹೋರಾಟ ಬರುವ ದಾರಿಯಲ್ಲಿ ಉಕ್ಕಿನ ಮೊಳೆಗಳನ್ನು ಬಿತ್ತಬೇಕು)
ಪೊಲೀಸ್ ಠಾಣೆಯಿಂದ ಆರಂಭಗೊಂಡು ಸುಪ್ರೀಂ ಕೋರ್ಟ್ ವರೆಗೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ತಾಕತ್ತು ಇರಬೇಕು. ದೇಶವೆಂದರೆ ಅಂತಿಮವಾಗಿ ತಾನೆ ಎಂದು ಘೋಷಿಸಿಕೊಳ್ಳಬೇಕು. ಇಂತಹ ಯಾವ ಅರ್ಹತೆಗಳು ಇಲ್ಲದ ರಾಹುಲ್ ಗಾಂಧಿ ಯಾರಿಗಾದರೂ ಅಸಮರ್ಥನೆಂದೆ ಕಂಡರೆ ಆಶ್ಚರ್ಯಪಡುವಂತದ್ದೇನೂ ಇಲ್ಲ.!
ಕಾಂಗ್ರೆಸ್ ಮುಕ್ತ ಭಾರತವಾದರೂ ಏನೂ ನಷ್ಟವಿಲ್ಲ. ಆದರೆ ಈ ದೇಶದ ಜನ ಪರ್ಯಾಯ ರಾಜಕಾರಣದ ಆಯವನ್ನು ಕಟ್ಟದೇ ಹೋದರೆ ಪ್ರಜಾಪ್ರಭುತ್ವವೇ ಕುಸಿದು ಬಿಡುತ್ತದೆ.
ಬಿಜೆಪಿಯ ಗೆಲುವನ್ನು ಕಾಂಗ್ರೆಸ್ ಅಥವಾ ಇನ್ನಾವುದೇ ಪಕ್ಷದ ಸೋಲು, ಆ ಪಕ್ಷಗಳು ಜನರ ವಿಶ್ವಾಸ ಕಳೆದುಕೊಂಡಿವೆ ತೀರ್ಮಾನಿಸುವ ಮುಂಚೆ ಬಿಜೆಪಿ ಅನುಸರಿಸುತ್ತಿರುವ ಪ್ರಜಾಪ್ರಭುತ್ವ ವಿರೋಧಿ ರಾಜಕೀಯ ( ಕು) ತಂತ್ರಗಳ ಬಗ್ಗೆ ಗಮನವಿರಿಸಬೇಕು.
ಸದ್ಯ ಮಾತು ಸೋತ ಭಾರತ ಮಾತ್ರ ಕಾಣುತ್ತಿದೆ.