► ನಂಜುಂಡಪ್ಪ.ವಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಪ್ರಚಾರ ಮತ್ತು ಮತದಾನದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಡುವೆ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಯಿದೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆಸುವುದು ಸೂಕ್ತ ಎಂದು ಕೇಂದ್ರ ಗುಪ್ತದಳ ವರದಿ ನೀಡಿದೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಈ ಸಂಬಂಧ ವಿವರವಾದ ಮಾಹಿತಿ ಒದಗಿಸಿದ್ದು, ಮತದಾನಕ್ಕೆ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹೇಳಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಚುನಾವಣೆಗೂ ಮುನ್ನವೇ ಮಾತಿನ ಸಮರ ತೀವ್ರಗೊಂಡಿದೆ. ಇದು ಸದ್ಯಕ್ಕೆ ನಿಲ್ಲುವ ಲಕ್ಷಣವಿಲ್ಲ. ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಲಂಗು ಲಗಾಮು ಇಲ್ಲದಂತೆ ವರ್ತಿಸಲಿದ್ದು, ಆಯೋಗ ಸೂಕ್ತ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಕ್ತ ಮತ್ತು ನ್ಯಾಯಯುತ ಮತದಾನ ಮರಿಚಿಕೆಯಾಗಲಿದೆ. ಅದಕ್ಕಾಗಿ ಆಯೋಗ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಧಿಕಾರಕ್ಕಾಗಿ ಮೂರು ರಾಜಕೀಯ ಪಕ್ಷಗಳು ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ನಿರತವಾಗಿವೆ. ಇಂತಹ ಸಂದರ್ಭದಲ್ಲಿ ಮತಗಳ ದ್ರುವೀಕರಣಕ್ಕಾಗಿ ಎಂತಹ ದುಸ್ಸಾಹಸಕ್ಕೆ ಬೇಕಾದರೂ ರಾಜಕೀಯ ಪಕ್ಷಗಳು ಕೈ ಹಾಕುತ್ತವೆ. ಇದನ್ನು ಮನಗಂಡು ಆಯೋಗ ಎಚ್ಚರಿಕೆ ಹೆಜ್ಜೆ ಇಡಬೇಕಾಗುತ್ತದೆ.
ಅಗತ್ಯಕ್ಕೆ ಅನುಗುವಣಗಾಗಿ ಪೊಲೀಸ್ ಬಲವನ್ನು ಬಳಸಿಕೊಳ್ಳಬೇಕು. ಬೇರೆ ಯಾವುದೇ ರಾಜ್ಯಗಳಲ್ಲಿ ಚುನಾವಣೆ ಇಲ್ಲದ ಕಾರಣ ಕೇಂದ್ರೀಯ ಪಡೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕರೆಸಿಕೊಳ್ಳಬೇಕು. ಪರಿಸ್ಥಿತಿ ಕಠಿಣವಾಗಿರುವುದರಿಂದ ಒಂದು ಹಂತದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಕನಿಷ್ಠ ಒಂದು ವಾರ ಅಂತರ ಇರಬೇಕು. ಮೊದಲ ಹಂತಕ್ಕೆ ಬಳಕೆ ಮಾಡಿದ ಕೇಂದ್ರೀಯ ಪಡೆಗಳನ್ನು ಎರಡನೇ ಹಂತದ ಮತದಾನಕ್ಕೆ ನಿಯೋಜಿಸಲು ಸಮಯಾವಕಾಶ ಬೇಕಾಗುತ್ತದೆ ಎಂದು ಹೇಳಿದೆ.
ವಿಶೇಷವಾಗಿ ಕರ್ನಾಟಕ ಹಲವು ರಾಜ್ಯಗಳ ಗಡಿಗಳನ್ನು ಹಂಚಿಕೊಂಡಿದ್ದು, ನೆರೆ ರಾಜ್ಯಗಳ ಮೇಲೆ ಕಣ್ಗಾವಲು ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ನೆರೆ ರಾಜ್ಯಗಳಿಂದ ಗಡಿ ಪ್ರದೇಶಕ್ಕೆ ಸುಲಭವಾಗಿ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಬಹುದು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ತಮಿಳುನಾಡು, ಕೇರಳ ರಾಜ್ಯಗಳ ಪೊಲೀಸ್ ಬಲವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ ಎಂದು ಗುಪ್ತದಳ ಸಲಹೆ ಮಾಡಿದೆ.
ಕಾನೂನು ಸುವ್ಯವಸ್ಥೆ ಮತ್ತು ಮತದಾನ ಸಂದರ್ಭದಲ್ಲಿ ನಡೆಯಬಹುದಾದ ಘಟನೆಗಳ ಕುರಿತು ಗುಪ್ತದಳ ಕಳೆದ ಎರಡು ತಿಂಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದೆ. ರಾಜ್ಯದಲ್ಲಿ ಹಿಂದೆಂದೂ ಇಲ್ಲದಷ್ಟು ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಆಯೋಗ ಎಚ್ಚರಿಕೆ ಹೆಜ್ಜೆಗಳನ್ನಿಡಬೇಕು ಎಂದಿದೆ.
ಈ ಎಲ್ಲಾ ಮಾಹಿತಿ ಅನುಸಾರ ಆಯೋಗ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಂದಲೂ ವರದಿ ತರಿಸಿಕೊಳ್ಳಲಿದೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಿ ಅಂತಿಮವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.