ಅಝರ್ ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್‌ನ ಮಹಿಳಾ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ, ಇಳವೆನ್ನಿಲಾ ವಾಳರಿವನ್, ರಮಿತಾ ಹಾಗೂ ಶ್ರೇಯಾ ಅಗರವಾಲ್ ಅವರನ್ನೊಳಗೊಂಡ ತಂಡವು ಮಂಗಳವಾರ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ.
10 ಮೀಟರ್ ಏರ್ ರೈಫಲ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಭಾರತದ ತ್ರಿವಳಿ ಶೂಟರ್‌ಗಳು 17–5 ಅಂತರದಲ್ಲಿ ಡೆನ್ಮಾರ್ಕ್ ದೇಶದ ಅನ್ನಾ ನೆಲ್ಸನ್, ಎಮ್ಮಾ ಕೋಚ್ ಹಾಗೂ ರಿಕ್ಕೆ ಮಾಂಗ್ ಇಬ್ಸೆನ್‌ರನ್ನು ಪರಾಭವಗೊಳಿಸಿದರು. ಕಂಚಿನ ಪದಕ ಪೋಲೆಂಡ್ ತಂಡದ ಪಾಲಾಯಿತು.
ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನವನ್ನಲಂಕರಿಸಿದ್ದ ಭಾರತದ ಇಳವೆನ್ನಿಲಾ, ರಮಿತಾ ಮತ್ತು ಶ್ರೇಯಾ, ಸೋಮವಾರ ಎರಡು ಸುತ್ತುಗಳ ಅರ್ಹತಾ ಪಂದ್ಯಗಳ ಮೂಲಕ ಫೈನಲ್ ಪ್ರವೇಶಿಸಿದ್ದರು. 90 ಶೂಟ್ ಬಳಿಕ ಮೊದಲ ಸುತ್ತಿನಲ್ಲಿ 944.4 ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದ ಭಾರತ, ಎರಡನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ ಡೆನ್ಮಾರ್ಕ್‌ಗಿಂತ ಹಿಂದೆ ಉಳಿದಿತ್ತು.
ಪುರುಷರ ತಂಡದ ಕೈತಪ್ಪಿದ ಕಂಚಿನ ಪದಕ
ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ಭಾರತದ ಪುರುಷರ ತಂಡವು, ಕ್ರೊವೇಷ್ಯಾ ಎದುರು ನಿರಾಸೆ ಅನುಭವಿಸಿತು. ರುದ್ರಾಂಕ್ಷ್ ಪಾಟೀಲ್, ಪಾರ್ಥ್ ಮಖೀಜಾ ಮತ್ತು ಧನುಷ್ ಶ್ರೀಕಾಂತ್ ಅವರನ್ನೊಳಗೊಂಡ ತಂಡವು 10– 16 ಅಂತರದಲ್ಲಿ ಕ್ರೊವೇಷ್ಯಾ ಎದುರು ಗುರಿ ತಪ್ಪಿತು.
12 ಸದಸ್ಯರನ್ನು ಒಳಗೊಂಡ ಭಾರತ ರೈಫಲ್ ತಂಡವು ಸದ್ಯ, ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ಚಿನ್ನ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ತನ್ನದಾಗಿಸಿಕೊಂಡಿರುವ ಸರ್ಬಿಯಾ ಅಗ್ರಸ್ಥಾನದಲ್ಲಿದೆ.