Home Uncategorized ದಮ್ಮಾಮ್ :ಇಂಡಿಯನ್ ಸೋಶಿಯಲ್ ಫೋರಂ ನಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ

ದಮ್ಮಾಮ್ :ಇಂಡಿಯನ್ ಸೋಶಿಯಲ್ ಫೋರಂ ನಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ

►►ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

►►ಸಾಧಕರಿಗೆ ಸನ್ಮಾನ

►►ಕೊರೋನಾ ವಾರಿಯರ್ಸ್ ಸ್ಯಾಕೊ, ಕೆ.ಎಂ.ಟಿ ಕಂಪೆನಿಗಳಿಗೆ ಗೌರವ

ದಮ್ಮಾಮ್: “ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದ ಪ್ರಾದೇಶಿಕ ವೈವಿದ್ಯತೆಯನ್ನು  ನಾಶಪಡಿಸುವ ತಂತ್ರಗಳು ವೇಗಪಡೆದುಕ್ಕೊಳ್ಳುತ್ತಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯದ ಭಾಷೆ, ಸಂಸ್ಕೃತಿ, ಅಸ್ಮಿತೆಯನ್ನ  ಉಳಿಸಿ ಬೆಳೆಸಿ ಅದರ ಮಹತ್ವವನ್ನ ಜನರೆಡೆಗೆ ಪ್ರಚುರಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿ ವರ್ಷ  ಸೌದಿ ಅರೇಬಿಯಾದಾದ್ಯಂತ ರಾಜ್ಯೋತ್ಸವ ಆಚರಣೆಯ ಮೂಲಕ ಇಂಡಿಯನ್ ಸೋಶಿಯಲ್ ಫೋರಮ್ ಅನಿವಾಸಿ ಕನ್ನಡಿಗರಲ್ಲಿ ರಾಜ್ಯ ಸ್ನೇಹವನ್ನು ಬಿತ್ತಲು  ಶ್ರಮಿಸಿದೆ” ಎಂದು ಇಂಡಿಯನ್ ಸೋಶಿಯಲ್ ಫೋರಮ್, ಪೂರ್ವ ಪ್ರಾಂತ್ಯ ಅಧ್ಯಕ್ಷ  ಮುಹಮ್ಮದ್ ಷರೀಫ್ ಜೋಕಟ್ಟೆ ಹೇಳಿದರು.

ಇಂಡಿಯನ್ ಸೋಶಿಯಲ್ ಫೋರಮ್  ವತಿಯಿಂದ 65 ನೇ ಕನ್ನಡ ರಾಜ್ಯೋತ್ಸವದ  ಪ್ರಯುಕ್ತ ರವಿವಾರದಂದು ಆನ್ ಲೈನ್ ಮೂಲಕ ನಡೆದ ಅನಿವಾಸಿ ಕನ್ನಡಿಗರ ಸಮ್ಮಿಲನ 2020  ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಉದ್ಘಾಟನ ಭಾಷಣಗೈದ ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಜೀದ್ ಖಾನ್, “ರಾಜ್ಯದಲ್ಲಿ ಪ್ರವಾಹದಿಂದಾಗಿ ಈಗಾಗಲೇ ರೈತರ ಜೀವನ ದುಸ್ತರವಾಗಿದೆ.  ರೈತರ ಯಾತನೆಗಳನ್ನ ಪರಿಗಣಿಸದೆ ಕರಾಳ ಕೃಷಿ ಕಾನೂನುಗಳನ್ನು ಜಾರಿಗೆ ತಂದು ಅವರನ್ನು ಮುಗಿಸಿಬಿಡಲಾಗುತ್ತಿದೆ. ಕನ್ನಡ ಮಣ್ಣಿನ ರೈತರ ಬವಣೆಯನ್ನು ಅರ್ಥ ಮಾಡಿಕೊಳ್ಳದೆ ಹಿಂದಿ ಹೇರಿಕೆಯಂತಹ ಅನಗತ್ಯ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದನ್ನು ರಾಜ್ಯದ ಜನತೆ ಅರ್ಥೈಸಬೇಕಾಗಿದೆ” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಖ್ಯಾತ ರಂಗಕರ್ಮಿ ಪಿಯುಸಿಎಲ್ ರಾಜ್ಯಕಾರ್ಯದರ್ಶಿ ಲೇಖಕ ವೆಂಕಟರಾಜು ಮಾತನಾಡುತ್ತಾ, “ಕನ್ನಡ ಭಾಷೆ ಕೇವಲ ಭಾಷೆಯಾಗಿರದೆ ಅದು ಕನ್ನಡಿಗರ ಜೀವನವೂ ಆಗಿದೆ. ಭಾಷೆಯೇ ರಾಷ್ಟ್ರಗಳನ್ನು  ಸೃಷ್ಟಿಸಿದ ಇತಿಹಾಸಗಳಿವೆ. ಭಾಷೆಯನ್ನು ಇಲ್ಲವಾಗಿಸಲು ನಡೆಸುವ ಪ್ರಯತ್ನವು ಸಫಲವಾಗದು” ಎಂದರು.  ಅವರು ಕನ್ನಡದ ಭಾಷಾ ಇತಿಹಾಸ ಮತ್ತು ಸಹಿಷ್ಣುತೆಯ ಗುಣವನ್ನು ವಿದ್ವತ್ ಪೂರ್ಣವಾಗಿ ಶೋತೃಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.

ಸಾಧಕ ಅನಿವಾಸಿ ಕನ್ನಡಿಗರನ್ನು ಗುರುತಿಸಿ ಗೌರವಿಸವುದಕ್ಕಾಗಿ ಐ.ಎಸ್.ಎಫ್ ಪ್ರತಿ ವರ್ಷದಂತೆ ಈ ವರ್ಷವೂ ‘ರಾಜ್ಯೋತ್ಸವ ಸನ್ಮಾನ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ದಾನಿ ಸಮಾಜಸೇವಕ ಜಾಯ್ ಫೆರ್ನಾಂಡಿಸ್ ಮತ್ತು  ಅನ್ವರ್ ಸಾದತ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಸನ್ಮಾನಿತರು ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ, ಕೋವಿಡ್ ಸಂಕಷ್ಟದ ಅವಧಿಯಲ್ಲಿ ಅನಿವಾಸಿ ಕನ್ನಡಿಗರ ನೆರವಿಗೆ ನಿಂತ SAQCO  ಮತ್ತ್ತು  KMT ಸಂಸ್ಥೆಗಳಿಗೆ  ಸ್ಮರಣಿಕೆ  ನೀಡಿ ಗೌರವಿಸಲಾಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:

ಕರ್ನಾಟಕ ದ ಪ್ರಸಕ್ತ ಪರಿಸ್ಥಿತಿಯನ್ನು ಬಿಂಬಿಸುವ ಸೋಶಿಯಲ್ ಫೋರಮ್ ಕಲಾತಂಡ ದ ಪ್ರಹಸನವು ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.  ಕರ್ನಾಟಕ ದ ಇತಿಹಾಸ ಪುರುಷರ ವೇಷ ಧರಿಸಿ ವೇದಿಕೆಯಲ್ಲಿ ಹೆಜ್ಜೆಯಿಟ್ಟ ಪುಟಾಣಿಗಳು ಶೋತೃಗಳ ಮನ ಸೆಳೆದರು. ಕಾರ್ಯಕ್ರಮವನ್ನು  ಆನ್ ಲೈನ್ ನಲ್ಲಿ ನೇರಪ್ರಸಾರ ಮಾಡಲಾಗಿತ್ತು ಮತ್ತು ವೀಕ್ಷಕರಿಗೆ ರಸಪ್ರಶ್ನೆ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು.  ದೇಶ-ವಿದೇಶಗಳಿಂದ ನೂರಾರು ಮಂದಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಐ.ಎಸ್.ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಅಶ್ರಫ್ ಪುತ್ತೂರು, ರಾಜ್ಯ  ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ, ಉಪಾಧ್ಯಕ್ಷ ಸಲಾಹುದ್ದೀನ್ ತುಮಕೂರು,  ಫ್ರಟೆರ್ನಿಟಿ ಫೋರಮ್ ದಮ್ಮಾಮ್ ಜಿಲ್ಲಾಧ್ಯಕ್ಷ ಸಾಜಿದ್ ಮತ್ತು  ಐ.ಎಸ್.ಎಫ್ ನ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಐ.ಎಸ್.ಎಫ್ ಜಂಟಿ ಕಾರ್ಯದರ್ಶಿ ನೌಷಾದ್ ಬೋಳಾರ್ ಸ್ವಾಗತಿಸಿ , ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ವಂದಿಸಿದರು. ಝೈನುದ್ದೀನ್ ಸಜೀಪ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version