ಐಪಿಎಲ್ 2022: ತನ್ನದೇ ದಾಖಲೆ ಮುರಿದ ಉಮ್ರಾನ್ ಮಲಿಕ್ !

Prasthutha|

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವೇಗದ ಬೌಲಿಂಗ್ ಮೂಲಕ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲೇ 2ನೇ ಅತಿವೇಗದ ಎಸೆತ ಎಸೆದು ದಾಖಲೆ ಬರೆದಿದ್ದಾರೆ. 

- Advertisement -

ಗುರುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಲಿಕ್ ಎಸೆದ 20ನೇ ಓವರ್‌ನ 4ನೇ ಎಸೆತ ಗಂಟೆಗೆ 157 ಕಿ.ಮೀ. ವೇಗ ದಾಖಲಿಸಿದೆ. ಆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿನ ತನ್ನದೇ ದಾಖಲೆಯನ್ನು (ಗಂಟೆಗೆ 154 ಕಿ.ಮೀ.) ಮಲಿಕ್ ಮುರಿದಿದ್ದಾರೆ.

ಶರವೇಗದ ಸರದಾರ ಶಾನ್‌ ಟೈಟ್‌ !

- Advertisement -

ಐಪಿಎಎಲ್‌ನ ಅತಿವೇಗದ ಎಸೆತದ ದಾಖಲೆ ಅಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದ ವೇಳೆ ಟೈಟ್, ಗಂಟೆಗೆ 157.71 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿ, ಗಂಟೆಗೆ 156. 22 ಕಿ.ಮೀ. ವೇಗ ದಾಖಲಿಸಿರುವ ದಕ್ಷಿಣ ಆಫ್ರಿಕಾದ ಏನ್ರಿಚ್ ನೋಕಿಯಾ, ಐಪಿಎಲ್ ಅತಿವೇಗದ ಎಸೆತದ ದಾಖಲೆ ವೀರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 

ಅಖ್ತರ್ ಹೆಸರಿನಲ್ಲಿದೆ ವಿಶ್ವ ದಾಖಲೆ

ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ಎಸೆತ ಎಸೆದ ದಾಖಲೆ ಪಾಕಿಸ್ತಾನದ ಶೋಯಿಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿ ಅಖ್ತರ್ ವಿಶ್ವದಾಖಲೆ ಬರೆದಿದ್ದರು.

ಸನ್‌ರೈಸರ್ಸ್‌ ಹೈದ್ರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಬೌಲರ್ ಉಮ್ರಾನ್ ಮಲಿಕ್, ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲೇ ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡೆಸೆದು ಸುದ್ದಿಯಾಗಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಎಸೆದ 10ನೇ ಓವರ್‌ನ ಎರಡನೇ ಎಸೆತ 154 ಕಿ.ಮೀ ವೇಗ ದಾಖಲಿಸಿತ್ತು. 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದು ತಮ್ಮ ಮುಂದಿನ ಗುರಿ ಎಂದು ಮಲಿಕ್ ಈ ಹಿಂದೆ ಹೇಳಿದ್ದರು.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಶರವೇಗದಲ್ಲಿ ಬೌಲಿಂಗ್ ಮಾಡಿ, ಮೊದಲ ಬಾರಿ ಐದು ವಿಕೆಟ್ ಗೊಂಚಲು ಗಳಿಸಿ ವ್ಯಾಪಕ ಪ್ರಶಂಸೆ ಪಡೆದಿದ್ದರು. ಈ ಬಾರಿಯ ಮೆಗಾ ಹರಾಜಿಗೂ ಮುನ್ನ 4 ಕೋಟಿ ನೀಡಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು, ಉಮ್ರಾನ್ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಕ್ರಿಕೆಟ್‌ನಲ್ಲಿ ಮಗನ ಸಾಧನೆಯ ನಡುವೆಯೂ ಉಮ್ರಾನ್ ತಂದೆ ತಮ್ಮ ಊರಲ್ಲಿ ಹಣ್ಣು ಹಂಪಲುಗಳ ಸಣ್ಣ ಅಂಗಡಿ ನಡೆಸುತ್ತಾರೆ. ʼಯಾವ ಕೆಲಸವೂ ಸಣ್ಣದಲ್ಲʼ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

ಐಪಿಎಲ್ ಟೂರ್ನಿಯ  ವೇಗದ ಎಸೆತಗಳು 
157.71 – ಶಾನ್ ಟೈಟ್
157.30 – ಉಮ್ರಾನ್ ಮಲಿಕ್ 
156. 22 – ಏನ್ರಿಚ್ ನೋಕಿಯಾ
155.60 – ಉಮ್ರಾನ್ ಮಲಿಕ್ 
154.80 – ಉಮ್ರಾನ್ ಮಲಿಕ್  

Join Whatsapp
Exit mobile version