Home ಕ್ರೀಡೆ ಐಪಿಎಲ್‌ 2022 ಫೈನಲ್‌: ಗುಜರಾತ್‌ ಟೈಟನ್ಸ್‌ ಗೆಲುವಿಗೆ 131 ರನ್ ಗುರಿ

ಐಪಿಎಲ್‌ 2022 ಫೈನಲ್‌: ಗುಜರಾತ್‌ ಟೈಟನ್ಸ್‌ ಗೆಲುವಿಗೆ 131 ರನ್ ಗುರಿ

15ನೇ ಆವೃತ್ತಿಯ  ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (ಐಪಿಎಲ್) ಫೈನಲ್ ಪಂದ್ಯದಲ್ಲಿ ಅತಿಥೇಯ ಗುಜರಾತ್ ಟೈಟನ್ಸ್ ಗೆಲುವಿಗೆ 131 ರನ್‌ಗಳ ಸುಲಭ ಸವಾಲು ಎದುರಾಗಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಅಂತಿಮ ಹಣಾಹಣಿಯಲ್ಲಿ ನಿರೀಕ್ಷಿತ ಪೈಪೋಟಿ ನೀಡಲು ವಿಫಲವಾಗಿರುವ ರಾಜಸ್ಥಾನ ರಾಯಲ್ಸ್ ಪಾಂಡ್ಯ ಪಡೆಗೆ ಶರಣಾಗುವ ಸೂಚನೆ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ಸಾರಥ್ಯದ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 130 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ (22 ರನ್) ಮತ್ತು ಜಾಸ್ ಬಟ್ಲರ್ (39 ರನ್) ಹೊರತು ಪಡಿಸಿ ತಂಡದ ಪಾಲಿಗೆ ಉಳಿದ ಬ್ಯಾಟರ್‌ಗಳು ನೆರವಾಗಲಿಲ್ಲ. ‌

ನಾಯಕ ಸಂಜು ಸ್ಯಾಮ್ಸನ್ 14 ರನ್, ದೇವದತ್ ಪಡಿಕ್ಕಲ್ 2, ಶಿಮ್ರಾನ್ ಹೇಟ್ಮೇರ್ 11, ಆರ್ ಅಶ್ವಿನ್ 6, ರಿಯಾನ್ ಪರಾಗ್ 15, ಟ್ರೆಂಟ್ ಬೌಲ್ಟ್ 11 ಮತ್ತು ಮೆಕಾಯ್ 8 ರನ್‌ಗಳಿಸಿ ನಿರ್ಗಮಿಸಿದರು. 31 ರನ್‌ಗಳಿಸುವಷ್ಟರಲ್ಲಿ ಮೊದಲನೇ ವಿಕೆಟ್ ಮತ್ತು 9ನೇ ಓವರ್‌ನಲ್ಲಿ 60 ರನ್ ತಲುಪುವಷ್ಟರಲ್ಲಿ ಸ್ಯಾಮ್ಸನ್ ರೂಪದಲ್ಲಿ ರಾಜಸ್ಥಾನ 2ನೇ ವಿಕಟ್ ಕಳೆದುಕೊಂಡಿತ್ತು. ಆದರೆ ಆ ಬಳಿಕ ರನ್ ವೇಗಕ್ಕೆ ಕಡಿವಾಣ ಹಾಕುವುದರ ಜೊತೆಗೆ ನಿರಂತರವಾಗಿ ವಿಕೆಟ್ ಪಡೆಯುವಲ್ಲಿ ಟೈಟನ್ಸ್ ಬೌಲರ್‌ಗಳು ಯಶಸ್ವಿಯಾದರು. 

ನಾಯಕ ಹಾರ್ದಿಕ್ ಪಾಂಡ್ಯ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಜಾಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೇಟ್ಮೇರ್ ಪಡೆಯುವ ಮೂಲಕ ರಾಜಸ್ಥಾನದ ರನ್ ಬೇಟೆಗೆ ಪಾಂಡ್ಯಾ ಕಡಿವಾಣ ಹಾಕಿದರು. ಸಾಯ್ ಕಿಶೋರ್ 2 ವಿಕೆಟ್ ಪಡೆದರೆ, ಉಳಿದಂತೆ ಮುಹಮ್ಮದ್ ಶಮಿ, ರಶೀದ್ ಖಾನ್ ಹಾಗೂ ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.

ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಟೈಟನ್ಸ್ ಕೈ ಮೇಲಾಗಿದೆ. ಲೀಗ್ ಹಂತದ ಪಂದ್ಯದಲ್ಲಿ 37 ರನ್ ಅಂತರದಲ್ಲಿ ಗೆದ್ದಿದ್ದ ಪಾಂಡ್ಯ ಪಡೆ, ಕ್ವಾಲಿಫೈಯರ್-1ರಲ್ಲಿ ಮೂರು ಎಸೆತಗಳು ಬಾಕಿ ಉಳಿದಿರುವಂತೆ ಏಳು ವಿಕೆಟ್ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. 

Join Whatsapp
Exit mobile version