Home ಕ್ರೀಡೆ ಸವಾಲಾಗದ ರಾಯಲ್ಸ್, ಗುಜರಾತ್ ಟೈಟನ್ಸ್ ಐಪಿಎಲ್ 2022 ಚಾಂಪಿಯನ್ !

ಸವಾಲಾಗದ ರಾಯಲ್ಸ್, ಗುಜರಾತ್ ಟೈಟನ್ಸ್ ಐಪಿಎಲ್ 2022 ಚಾಂಪಿಯನ್ !

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ (ಐಪಿಎಲ್) ಪ್ರವೇಶ ಪಡೆದ ಮೊದಲ ವರ್ಷದಲ್ಲೇ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಅಹಮದಾಬಾದ್‌ನಲ್ಲಿ ನಡೆದ 15ನೇ ಆವೃತ್ತಿಯ  ಐಪಿಎಲ್‌ನ ಫೈನಲ್ ಪಂದ್ಯದಲ್ಲಿ ಟೈಟನ್ಸ್, ರಾಜಸ್ಥಾನ ತಂಡವನ್ನು 7 ವಿಕೆಟ್ ಅಂತರದಲ್ಲಿ ಬಗ್ಗುಬಡಿಯಿತು.

ಆ ಮೂಲಕ 14 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮುಖಭಂಗವಾಗಿದೆ. ಹಾರ್ದಿಕ್ ಪಾಂಡ್ಯ ತಮ್ಮ ಚೊಚ್ಚಲ ನಾಯಕತ್ವದ ಪ್ರಯತ್ನದಲ್ಲೇ ಪ್ರತಿಷ್ಠಿತ ಐಪಿಎಲ್ ಟ್ರೋಫಿ ಗೆದ್ದು ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ರಾಯಲ್ಸ್ ಗೆಲುವಿಗೆ 131 ರನ್‌ಗಳ ಸುಲಭ ಸವಾಲು ನೀಡಿತ್ತು. ಯಾವ ಹಂತದಲ್ಲೂ ಧೃತಿಗೆಡದೆ ಸವಾಲು ಬೆನ್ನಟ್ಟಿದ ಟೈಟನ್ಸ್, 18.1 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿದೆ. 

ಈ ಸೋಲಿನ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ರಾಜಸ್ಥಾನ, ಟೈಟನ್ಸ್‌ ಎದುರು ಹ್ಯಾಟ್ರಿಕ್‌ ಸೋಲು ಅನುಭವಿಸದಂತಾಗಿದೆ. ಲೀಗ್ ಹಂತದ ಪಂದ್ಯದಲ್ಲಿ 37 ರನ್ ಅಂತರದಲ್ಲಿ ಗೆದ್ದಿದ್ದ ಪಾಂಡ್ಯ ಪಡೆ, ಕ್ವಾಲಿಫೈಯರ್-1ರಲ್ಲಿ ಮೂರು ಎಸೆತಗಳು ಬಾಕಿ ಉಳಿದಿರುವಂತೆ ಏಳು ವಿಕೆಟ್ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು.

ಮೊದಲ ಓವರ್‌ನಲ್ಲೇ ಕ್ಯಾಚ್ ಕೈಚೆಲ್ಲಿದ ಲಾಭ ಪಡೆದ ಆರಂಭಿಕ ಶುಭ್‌ಮನ್‌ ಗಿಲ್ 45 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ಹಾರ್ದಿಕ್ ಪಾಂಡ್ಯ 34 ರನ್ ಮತ್ತು ಡೇವಿಡ್ ಮಿಲ್ಲರ್ 3 ಸಿಕ್ಸರ್‌ ನೆರವಿನೊಂದಿಗೆ ಬಿರುಸಿನ 32 ರನ್‌ಗಳಿಸಿ ಗೆಲುವಿನ ಔಪಚಾರಿಕತೆಯನ್ನು ಪೂರ್ತಿಗೊಳಿಸಿದರು.  ಆಮೂಲಕ ಅಂತಿಮ ಹಣಾಹಣಿಯಲ್ಲಿ ನಿರೀಕ್ಷಿತ ಪೈಪೋಟಿ ನೀಡಲು ವಿಫಲವಾಗಿರುವ ರಾಜಸ್ಥಾನ ರಾಯಲ್ಸ್ ಪಾಂಡ್ಯ ಪಡೆಗೆ ಸುಲಭವಾಗಿಯೇ ಶರಣಾಗಿದೆ. 

ರಾಜಸ್ಥಾನ ರಾಯಲ್ಸ್ 130/9ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ಸಾರಥ್ಯದ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 130 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ (22 ರನ್) ಮತ್ತು ಜೋಸ್ ಬಟ್ಲರ್ (39 ರನ್) ಹೊರತು ಪಡಿಸಿ ತಂಡದ ಪಾಲಿಗೆ ಉಳಿದ ಬ್ಯಾಟರ್‌ಗಳು ನೆರವಾಗಲಿಲ್ಲ. 

ನಾಯಕ ಸಂಜು ಸ್ಯಾಮ್ಸನ್ 14 ರನ್, ದೇವದತ್ ಪಡಿಕ್ಕಲ್ 2, ಶಿಮ್ರಾನ್ ಹೇಟ್ಮೇರ್ 11, ಆರ್ ಅಶ್ವಿನ್ 6, ರಿಯಾನ್ ಪರಾಗ್ 15, ಟ್ರೆಂಟ್ ಬೌಲ್ಟ್ 11 ಮತ್ತು ಮೆಕಾಯ್ 8 ರನ್‌ಗಳಿಸಿ ನಿರ್ಗಮಿಸಿದರು. 31 ರನ್‌ಗಳಿಸುವಷ್ಟರಲ್ಲಿ ಮೊದಲನೇ ವಿಕೆಟ್ ಮತ್ತು 9ನೇ ಓವರ್‌ನಲ್ಲಿ 60 ರನ್ ತಲುಪುವಷ್ಟರಲ್ಲಿ ಸ್ಯಾಮ್ಸನ್ ರೂಪದಲ್ಲಿ ರಾಜಸ್ಥಾನ 2ನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ಬಳಿಕ ರನ್ ವೇಗಕ್ಕೆ ಕಡಿವಾಣ ಹಾಕುವುದರ ಜೊತೆಗೆ ನಿರಂತರವಾಗಿ ವಿಕೆಟ್ ಪಡೆಯುವಲ್ಲಿ ಟೈಟನ್ಸ್ ಬೌಲರ್‌ಗಳು ಯಶಸ್ವಿಯಾದರು. 

ನಾಯಕ ಹಾರ್ದಿಕ್ ಪಾಂಡ್ಯ ಮೂರು ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮಾಯರ್ ಅವರನ್ನು ಔಟ್ ಮಾಡುವ ಮೂಲಕ ರಾಜಸ್ಥಾನದ ರನ್ ಬೇಟೆಗೆ ಪಾಂಡ್ಯ ಕಡಿವಾಣ ಹಾಕಿದರು. ಸಾಯಿ ಕಿಶೋರ್ 2 ವಿಕೆಟ್ ಪಡೆದರೆ, ಉಳಿದಂತೆ ಮೊಹಮ್ಮದ್ ಶಮಿ, ರಶೀದ್ ಖಾನ್ ಹಾಗೂ ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.

Join Whatsapp
Exit mobile version