ನವದೆಹಲಿ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದು ಲೋಕಸಭೆಗೆ ನುಗ್ಗಿ ಆತಂಕ ಸೃಷ್ಟಿಸಿದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸಂಸದರು ಯಾವ ಹಿನ್ನೆಲೆಯಲ್ಲಿ ಅವರು ಪಾಸ್ ಕೊಟ್ಟಿದ್ದರು ಎಂಬ ಬಗ್ಗೆ ತನಿಖೆಯಾಗಲಿದೆ. ಯಾವುದೇ ಕಾರಣಕ್ಕೂ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರು ಬಂದಾಗ ಪಾಸ್ ಕೊಡುವುದು ಸಹಜ. ಪ್ರತಾಪ ಸಿಂಹ ಪಾಸ್ ಕೊಟ್ಟ ವಿಚಾರ ತನಿಖೆಗೆ ಒಳಪಡಲಿದೆ. ಮೂರು ಬಾರಿ ಪಾಸ್ ಪಡೆದಿರುವ ಬಗ್ಗೆ ಗೊತ್ತಿಲ್ಲ. ಮೈಸೂರಿನವರು ಎನ್ನುವ ಕಾರಣಕ್ಕೆ ಪಾಸ್ ಕೊಟ್ಟೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆ ವಿಷಾದನೀಯ, ಖಂಡನೀಯ. ಘಟನೆ ನಂತರ ಲೋಕಸಭೆ ಸ್ಪೀಕರ್, ಸಭಾ ನಾಯಕರು ಸಭೆ ನಡೆಸಿ ಸಂಸತ್ ನಲ್ಲಿ ಸುರಕ್ಷಾ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಘಟನೆಯಿಂದ ಪಾಠ ಕಲಿತುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ. ಎಲ್ಲರ ಸಲಹೆ ಪಡೆದು ಸಂಸತ್ ರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇಂತಹ ಘಟನೆಗಳಲ್ಲಿ ಸ್ಪೀಕರ್ ಈ ಹಿಂದೆ ಕೈಗೊಂಡ ಕ್ರಮಗಳಂತೆ ಈ ಬಾರಿಯೂ ಕ್ರಮ ಕೈಗೊಳ್ಳಲಾಗಿದೆ. ಆಯುಧ ಸೇರಿದಂತೆ ಇತರೆ ವಸ್ತು ಪಡೆದು ಗ್ಯಾಲರಿಗೆ ಬರುವುದು ಬೇಡ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ಕೈಗೊಂಡ ಪರಂಪರೆ ಪರಿಶೀಲಿಸಿ ಅದರಂತೆ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ ಮಟ್ಟದ ತನಿಖೆಗೆ ಸ್ಪೀಕರ್ ಆದೇಶ ನೀಡಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.