Home ಕರಾವಳಿ ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ ಕೊಡುವ ಬದಲು ಶಸ್ತ್ರಾಸ್ತ್ರ: ಯು.ಟಿ.ಖಾದರ್ ಆಕ್ರೋಶ

ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ ಕೊಡುವ ಬದಲು ಶಸ್ತ್ರಾಸ್ತ್ರ: ಯು.ಟಿ.ಖಾದರ್ ಆಕ್ರೋಶ

ಮಂಗಳೂರು: ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ ಕೊಡುವ ಬದಲು ಶಸ್ತ್ರಾಸ್ತ್ರ ಕೊಟ್ಟು, ತರಬೇತಿ ನೀಡುವ ಮೂಲಕ ರಾಜ್ಯದ ಆಳುವವರು ತಾಲಿಬಾನ್ ಆಗುತ್ತಿದ್ದಾರೆಯೇ ಎಂದು ಮಾಜಿ ಸಚಿವ ಯು. ಟಿ. ಖಾದರ್ ಪ್ರಶ್ನಿಸಿದ್ದಾರೆ.
ಕೆಲವರು ಎನ್ ಸಿಸಿ ತರಬೇತಿ ಇಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ಸರಕಾರದ ಮಾನ್ಯತೆ ಇದೆ. ಆದರೆ ಇಲ್ಲಿ ತರಬೇತಿ ಪಡೆದವರು ಯಾರು? ಇವರಿಗೆ ಅನುಮತಿ ಯಾರು ಕೊಟ್ಟರು? ಜಿಲ್ಲಾಧಿಕಾರಿ, ಪೊಲೀಸ್ ಅನುಮತಿ ಇಲ್ಲದೆ ಇದು ನಡೆದಿದೆ ಎಂದರೆ ಅದು ಸರಕಾರದ ಯುವ ಜನರ ಬಗೆಗಿನ ನಿಷ್ಕಾಳಜಿ ತೋರಿಸುತ್ತದೆ ಎಂದು ಖಾದರ್ ಕಿಡಿಕಾರಿದರು.
ಬಿಜೆಪಿಯು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿಲ್ಲ. ಆದರೆ ಶಾಲೆಗಳಲ್ಲಿ ನಡೆಯುವ ಇಂಥ ತರಬೇತಿಯನ್ನು ಮೌನವಾಗಿ ನೋಡುತ್ತದೆ. ಶಿಕ್ಷಣ ಮಂತ್ರಿ ಮತ್ತು ಗೃಹ ಸಚಿವರು ಇದಕ್ಕೆ ಜವಾಬ್ದಾರರು. ಅವರು ಕೂಡಲೆ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು ಮೌನ ಮುರಿದು ಇದನ್ನು ಗಮನಿಸಬೇಕು ಎಂದು ಖಾದರ್ ತಿಳಿಸಿದರು.
ಶಾಲೆಗಳು ಆರಂಭವಾದರೂ ಪುಸ್ತಕ ಇತ್ಯಾದಿ ಪೂರೈಸಿಲ್ಲ. ಮೊದಲು ಸರಿಪಡಿಸಲಿ. ಹಿಂದೆ ನಮ್ಮ ಪ್ರದೇಶದ ಶಾಲಾ ಮಕ್ಕಳಿಗೆ ಬಿಸಿ ಊಟಕ್ಕೆ ಕುಚ್ಚಲಕ್ಕಿ ಒದಗಿಸಿದ್ದೆವು. ಆದರೆ ಇವರಿಗೆ ಅದೆಲ್ಲ ಸಾಧ್ಯವಾಗಿಲ್ಲ. ಮೊದಲು ಸರಿಪಡಿಸಲಿ ಎಂದು ಖಾದರ್ ತಿಳಿಸಿದರು.
ಸೇವಾದಳದ ಕಾಂಗ್ರೆಸ್‌ನವರು, ದಲಿತರು, ಹಿಂದುಳಿದವರು ಹೀಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದರೆ ಸರಕಾರ ಸುಮ್ಮನಿರುತ್ತಿತ್ತೆ. ಬೆಳ್ತಂಗಡಿ ಶಾಸಕರು ಬ್ಯಾರಿ ಮತ ಬೇಡ ಎನ್ನುವುದು ಅಗ್ಗದ ರಾಜಕೀಯ. ಅವರಿಗೆ ಮತ ಹಾಕಿದವರಿಗೆ ಕೆಲಸ ಮಾಡಲಿ. ಎಂಡೋಸಲ್ಫಾನ್ ಬಗ್ಗೆ ಅಲ್ಲಿ ನಾವು ಮಾಡಿದ್ದು ಬಿಟ್ಟು ಇವರು ಮಾಡಿದ್ದೇನಿದೆ ಎಂದು ಖಾದರ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್, ಸಾಹುಲ್ ಹಮೀದ್, ಕಲಾವತಿ, ಡೆನಿಸ್ ಡಿಸೋಜಾ, ಭರತ್ ಶೆಟ್ಟಿ, ಇಮ್ತಿಯಾಜ್, ಚಿತ್ತರಂಜನ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version