Home Uncategorized ಸಿದ್ದಾಪುರ ಗ್ರಾಮ ಪಂಚಾಯತಿಯಿಂದ ಕಾರ್ಮಿಕ ಕುಟುಂಬಕ್ಕೆ ಅನ್ಯಾಯ

ಸಿದ್ದಾಪುರ ಗ್ರಾಮ ಪಂಚಾಯತಿಯಿಂದ ಕಾರ್ಮಿಕ ಕುಟುಂಬಕ್ಕೆ ಅನ್ಯಾಯ

►ಬಡವರಿಂದ ಹಣ ಪೀಕುತ್ತಿರುವ ಗ್ರಾಮ ಪಂಚಾಯತಿ: ಸೂಕ್ತ ತನಿಖೆಗೆ ಒತ್ತಾಯ

ಸಿದ್ದಾಪುರ: ಮನೆ ಕಟ್ಟಲು ಪರವಾನಿಗೆ ಪಡೆಯಲು ಗ್ರಾಮ ಪಂಚಾಯತಿಗೆ ಬಂದ ಕಾರ್ಮಿಕ ಮಹಿಳೆಯಿಂದ ಅನ್ಯಾಯವಾಗಿ ಹೆಚ್ಚಿನ ಹಣವನ್ನು ಪಡೆದಿರುವುದರಿಂದ ನೊಂದ ಮಹಿಳೆ ಗ್ರಾಮ ಪಂಚಾಯತಿ ಮುಂದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಹ್ಯ ಗ್ರಾಮದ ಕಾರ್ಮಿಕ ಮಹಿಳೆ ಸರಸು ಎಂಬವರು ಮನೆ ಕಟ್ಟಲು ಪರವಾನಿಗೆ ಪಡೆಯಲು ಮಾರ್ಚ್ 15 ರಂದು ಸಿದ್ದಾಪುರ ಗ್ರಾಮ ಪಂಚಾಯತಿಗೆ ಬಂದಿದ್ದರು. ಮಹಿಳೆಯಿಂದ ರೂ 9500 ಹಣವನ್ನು ಪಡೆದ ಗ್ರಾಮ ಪಂಚಾಯತಿ ಸಿಬ್ಬಂದಿ, ಕೇವಲ 960 ರೂಗಳು ಮಾತ್ರ ಪಾವತಿಸಿರುವುದಾಗಿ ಕಟ್ಟಡ ಪರವಾನಿಗೆಯ ಪತ್ರ ನೀಡಿದ್ದರು. ಬಳಿಕ ಇದರ ಬಗ್ಗೆ ಮಾಹಿತಿ ಬಯಸಿದಾಗ ಯಾವುದೇ ಉತ್ತರ ನೀಡದೆ ಮಹಿಳೆಯನ್ನು ಒಂದು ದಿನ ಪೂರ್ತಿ ಗ್ರಾಮ ಪಂಚಾಯತಿಯಲ್ಲಿ ಕೂರಿಸಿದ್ದರು.

ಗ್ರಾಮ ಪಂಚಾಯತಿ ಸಿಬ್ಬಂದಿ ಹೆಚ್ಚು ಹಣ ಪಡೆದು ಯಾವುದೇ ರಸೀದಿ ನೀಡದೆ ಇರುವುದರ ಬಗ್ಗೆ ಮಾರ್ಚ್ 16 ರಂದು ಮಹಿಳೆ ಗ್ರಾಮ ಪಂಚಾಯತಿಗೆ ದೂರು ನೀಡಿದರು. ಬಳಿಕ ಗ್ರಾಮ ಪಂಚಾಯತಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ 8540 ರೂಗಳ ರಸೀದಿಯನ್ನು ಮಹಿಳೆಗೆ ನೀಡಿದ್ದಾರೆ.

ಕೂಲಿ ಮಾಡಿ ಮನೆ ಕಟ್ಟಲು ಮುಂದಾದರೆ ಪರವಾನಿಗೆಗೆ ಹೆಚ್ಚು ಹಣ ಪಡೆದಿದ್ದಾರೆ. ಇನ್ನು ಮನೆ ಕೆಲಸ ಪೂರ್ತಿ ಮಾಡಬೇಕಾದರೆ ಯಾರಿಗೆಲ್ಲಾ ಹಣ ಕೊಡಬೇಕಾಗುತೆ ಎಂದು ಭಯವಾಗುತ್ತಿದೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಗ್ರಾಮ ಪಂಚಾಯತಿ ಮುಂದೆ ಕಣ್ಣೀರು ಹಾಕಿದರು.

ಬಡವರಿಂದ ಮಾತ್ರ ಅಭಿವೃದ್ಧಿ ಶುಲ್ಕ ವಸೂಲಿ: ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ವ್ಯಕ್ತಿಗಳು ಮನೆ ಕಟ್ಟುತ್ತಿದ್ದಾರೆ. ಆದರೆ ಯಾರಿಂದಲೂ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ ಮಾಡದ ಗ್ರಾಮ ಪಂಚಾಯತಿ ಬಡ ಕಾರ್ಮಿಕ ಮಹಿಳೆಯಿಂದ ಮಾತ್ರ ಹೆಚ್ಚುವರಿ ಹಣ ವಸೂಲಿ ಮಾಡಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹ: ಕಾರ್ಮಿಕ ಮಹಿಳೆಯಿಂದ ರೂ 9500 ಹಣ ಪಡೆದು ಕೇವಲ 960 ರೂಗಳ ರಸೀದಿ ನೀಡಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದ್ದಂತೆ ತೇಪೆ ಹಚ್ಚಲು ಅಭಿವೃದ್ಧಿ ಶುಲ್ಕದ ನೆಪದಲ್ಲಿ 8540 ರೂಗಳ ರಸೀದಿ ನೀಡಿದ್ದಾರೆಂದು ಗ್ರಾಮಸ್ಥ ಕೆ.ಎಸ್ ಪ್ರಶಾಂತ್ ಆರೋಪಿಸಿದರು. ಗ್ರಾಮ ಪಂಚಾಯತಿಯಲ್ಲಿ ನಿರಂತರವಾಗಿ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಅವ್ಯವಹಾರದ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪರಿಶೀಲಿಸಿ ಕ್ರಮ: ತನ್ನ ಗಮನಕ್ಕೆ ಬಾರದೆ ಗ್ರಾಮ ಪಂಚಾಯತಿ ಸಿಬ್ಬಂದಿ ಹೆಚ್ಚು ಹಣ ಪಡೆದು ರಸೀದಿ ನೀಡಿದ್ದಾರೆ. ನೊಂದ ಮಹಿಳೆ ಈಗಾಗಲೇ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಿಯಿಂದ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ರಸೀದಿ ಕೊಡುವಾಗೆ ಇಲ್ಲ. ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತುಳಸಿ ತಿಳಿಸಿದರು.

Join Whatsapp
Exit mobile version