ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಿದ್ಯಾರ್ಥಿ ವೀಸಾ ಪಡೆದವರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. 2022ರಲ್ಲಿ ಯುಎಸ್ಎ ದಾಖಲೆಯ 82,000 ವಿದ್ಯಾರ್ಥಿ ವೀಸಾಗಳನ್ನು ಭಾರತೀಯರಿಗೆ ನೀಡಿದೆ. ಚೀನಾ ಸಹಿತ ಬೇರೆ ಯಾವ ದೇಶವೂ ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿ ವೀಸಾ ಪಡೆಯಲು ಸಾಧ್ಯವಾಗಿಲ್ಲ ಎಂದು ಗುರುವಾರ ಭಾರತದಲ್ಲಿನ ಯುಎಸ್ಎ ರಾಯಭಾರಿ ಕಚೇರಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ರಾಯಭಾರ ಕಚೇರಿ ಸಂಬಂಧಿ ಜಾಲ ತಾಣಗಳಲ್ಲಿ ಕೂಡ ಈ ಮಾಹಿತಿಗಳು ಪ್ರಕಟಗೊಂಡಿವೆ. ಪ್ರತಿ ತಿಂಗಳು ಈ ಮಾಹಿತಿ ನವೀಕರಿಸಲ್ಪಡುತ್ತದೆ. ಈ ವರುಷದ ಮೊದಲ ಏಳು ತಿಂಗಳುಗಳಲ್ಲಿ ಚೀನೀಯರಿಗಿಂತ ದುಪ್ಪಟ್ಟು ವಿದ್ಯಾರ್ಥಿ ವೀಸಾಗಳನ್ನು ಭಾರತ ಪಡೆದಿದೆ. ಹಿಂದೆ ಹಲವು ವರುಷಗಳಲ್ಲಿ ಅಮೆರಿಕದ ವಿದ್ಯಾರ್ಥಿ ವೀಸಾ ಪಡೆಯುವುದರಲ್ಲಿ ಚೀನಾ ಮೊದಲ ಸ್ಥಾನದಲ್ಲಿ ಇತ್ತು.
ಇವು ವಲಸೆ ಅಲ್ಲದ ವಿದ್ಯಾರ್ಥಿ ವೀಸಾಗಳಾಗಿದ್ದು ಜನವರಿಯಿಂದ ಜುಲೈ ಅಂತ್ಯದವರೆಗೆ ಭಾರತದ 77, 999 ವಿದ್ಯಾರ್ಥಿಗಳು ಯುಎಸ್ಎಯ ಎಫ್- 1 ವೀಸಾ ಪಡೆದಿದ್ದಾರೆ. ಈ ಅವಧಿಯಲ್ಲಿ ಚೀನಾದ 46,145 ವಿದ್ಯಾರ್ಥಿಗಳೂ ಎಫ್ – 1 ವೀಸಾ ಗಳಿಸಿದ್ದಾರೆ. ಎಫ್- 1 ವೀಸಾಗಳು ವಲಸೆಗೆ ಅಲ್ಲದೆ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಮೊದಲಾದವುಗಳಲ್ಲಿ ಕಲಿಯಲು ಮತ್ತು ನಾನಾ ಬಗೆಯ ಕಲಿಕೆಯ ತರಬೇತಿಗಳಲ್ಲಿ ಅಮೆರಿಕದಲ್ಲಿ ಉಳಿಯಲು ನೀಡುವ ವೀಸಾ ಆಗಿರುತ್ತದೆ.
ಮುಖ್ಯವಾಗಿ ಕೊರೋನಾ ಸಾಂಕ್ರಾಮಿಕದ ಬಳಿಕ ಚೀನಾದಿಂದ ಅಮೆರಿಕಕ್ಕೆ ಉನ್ನತ ಶಿಕ್ಷಣ ಕಲಿಯಲು ಹೋಗುವವರ ಸಂಖ್ಯೆಯು ತೀರಾ ಕಡಿಮೆಯಾಗಿದೆ. ಈಗಲೂ ಯುಎಸ್ ಎಯಲ್ಲಿ ಕಲಿಯುತ್ತಲೇ ಇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಚೀನೀಯರ ಸಂಖ್ಯೆಯೇ ಅಧಿಕ. ಆ ಲೆಕ್ಕದಲ್ಲಿ ಭಾರತೀಯ ವಿದ್ಯಾರ್ಥಿಗಳು ಎರಡನೆಯ ಮತ್ತು ದಕ್ಷಿಣ ಕೊರಿಯಾದ ವಿದ್ಯಾರ್ಥಿಗಳು ಮೂರನೆಯ ಸ್ಥಾನದಲ್ಲಿ ಇದ್ದಾರೆ.