ಕನ್ಯಾಕುಮಾರಿ: ಕಾಂಗ್ರೆಸ್ ಪಕ್ಷದ ಹಲವು ನಾಯಕರೊಂದಿಗೆ ಗುರುವಾರ ಬೆಳಗ್ಗೆ ಹಿರಿಯ ಮುಖಂಡ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದಾರೆ. ಇದು ಸಾಕಷ್ಟು ಸವಾಲಿನ ಯಾತ್ರೆಯಾಗಿದ್ದು, ಕಾಂಗ್ರೆಸ್ ಪಕ್ಷವನ್ನು ದೇಶಾದ್ಯಂತ ಸಂಘಟಿಸಲು ಮತ್ತು ಪುನಶ್ಚೇತನಗೊಳಿಸಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ತ್ರಿವರ್ಣ ಧ್ವಜಾರೋಹಣದ ಮೂಲಕ ರಾಹುಲ್ ಗಾಂಧಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಈ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,570 ಕಿ.ಮೀ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.
118 ಯಾತ್ರಿಕರು ಮತ್ತು ಇತರ ನಾಯಕರೊಂದಿಗೆ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ ಅಗಸ್ತೇಶ್ವರಂ ಎಂಬಲ್ಲಿಂದ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ದ್ವೇಷ ಹರಡುತ್ತಿರುವವರಿಂದ ತನ್ನ ದೇಶವನ್ನು ಕಳೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬ ಆಶಯದೊಂದಿಗೆ ಕಾಂಗ್ರೆಸ್ ಪಕ್ಷವು ಆಯೋಜಿಸಿದ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರು ಬುಧವಾರ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಈ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಂಕಷ್ಟದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಪುನಶ್ಚೇತನಗೊಳಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಈ ಯಾತ್ರೆ ನಡೆಸಲು ಯೋಜನೆ ಹಾಕಿಕೊಂಡಿದ್ದು, ದೇಶವನ್ನು ಒಗ್ಗೂಡಿಸಲು ಸಕಾಲ ಎಂದು ತಿಳಿಸಿದ್ದಾರೆ. ಈ ಪಾದಯಾತ್ರೆಯು ಮುಂದಿನ ಐದು ತಿಂಗಳಲ್ಲಿ 12 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಲಿದೆ.