Home ಟಾಪ್ ಸುದ್ದಿಗಳು ಹೇರ್ ಕ್ಲಿಪ್‌, ಚಾಕು ಬಳಸಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಸೇನೆಯ ವೈದ್ಯ

ಹೇರ್ ಕ್ಲಿಪ್‌, ಚಾಕು ಬಳಸಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಸೇನೆಯ ವೈದ್ಯ

0

ಝಾನ್ಸಿ: ಸೇನೆಯ ವೈದ್ಯರೊಬ್ಬರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಔದಾರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಪನವೇಲ್‌–ಗೋರಖಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಶನಿವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಮಹಿಳೆ ಗೋಳಾಡುವುದನ್ನು ಕಂಡ ಟಿಕೆಟ್‌ ಚೆಕ್ಕಿಂಗ್‌ ಸಿಬ್ಬಂದಿ ಮತ್ತು ಸೇನಾ ವೈದ್ಯಾಧಿಕಾರಿ ಕೂಡಲೇ ಕಾರ್ಯಪ್ರವೃತ್ತರಾದರು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಮೇಜರ್‌ ಡಾ.ರೋಹಿತ್‌ ಬಚ್‌ವಾಲಾ (31) ಅವರು ರೈಲಿಗಾಗಿ ಕಾಯುತ್ತಿದ್ದರು. ತುಂಬು ಗರ್ಭಿಣಿಯನ್ನು ಕಂಡು ಸಹಾಯ ಮಾಡಲು ಮುಂದಾದ ಅವರು ರೈಲ್ವೆ ಸಿಬ್ಬಂದಿಯ ನೆರವಿನೊಂದಿಗೆ ಹೇರ್‌ ಕ್ಲಿಪ್‌, ಪಾಕೆಟ್‌ ಚಾಕು ಬಳಸಿ ಹೆರಿಗೆ ಮಾಡಿಸಿದರು.

‘ಹೊಟ್ಟೆ ನೋವಿನಿಂದ ಬಳಲಿದ್ದ ಮಹಿಳೆಯನ್ನು ಕಂಡ ಕೂಡಲೇ ಸಮಯ ವ್ಯರ್ಥ ಮಾಡದೇ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಮಾಡಿಸಲು ಸಿದ್ಧನಾದೆ. ವೈದ್ಯರು ತುರ್ತು ಸಂದರ್ಭಕ್ಕೆ ಸದಾ ಸಿದ್ಧರಾಗಿರಬೇಕು. ದೇವರ ದಯೆಯಿಂದ ನಾನು ಎರಡು ಜೀವಗಳನ್ನು ಉಳಿಸಿದೆ’ ಎಂದು ಡಾ.ರೋಹಿತ್‌ ತಿಳಿಸಿದರು.

ಹೆರಿಗೆ ಬಳಿಕ ಮಗು ಮತ್ತು ಬಾಣಂತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version