ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ ನ ಪುರುಷರ ವಿಭಾಗದ 4×400 ರಿಲೇ ಓಟದಲ್ಲಿ ಭಾರತೀಯ ತಂಡ ಏಷ್ಯನ್ ದಾಖಲೆ ನಿರ್ಮಿಸಿದರೂ ಸಹ ಫೈನಲ್ ಹಂತಕ್ಕೆ ತೇರ್ಗಡೆಗೊಳ್ಳುವಲ್ಲಿ ವಿಫಲವಾಗಿದೆ.
ಹೀಟ್ಸ್’ನಲ್ಲಿ ಮೂರು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಗುರಿ ಮುಟ್ಟಿದ ತಂಡಗಳಷ್ಟೇ ಫೈನಲ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. 8 ತಂಡಗಳು ಭಾಗವಹಿಸಿದ್ದ ಹೀಟ್ಸ್ ನಲ್ಲಿ 2ನೇ ಲೇನ್ ನಲ್ಲಿ ಓಡಿದ ಭಾರತೀಯರು 3.00.25 ಸೆಕಂಡ್’ಗಳಲ್ಲಿ ಓಟವನ್ನು ಪೂರ್ತಿಗೊಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 2.59.37 ಸಮಯ ತೆಗೆದುಕೊಂಡ ಬೆಲ್ಜಿಯಂನ ಓಟಗಾರರು ಮೂರನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಅರ್ಹತೆ ಪಡೆದರು. ಹೀಟ್ಸ್’ನಲ್ಲಿ ಮೊದಲ ಸ್ಥಾನ ಪಡೆದ ಅಮೆರಿಕಾದ ಓಟಗಾರರು, 2.57.77 ಸೆಕೆಂಡ್’ಗಳಲ್ಲಿ ಗುರಿ ಮುಟ್ಟಿದ್ದರು.
ಮುಹಮ್ಮದ್ ಅನಸ್, ಟಾಮ್ ನಿರ್ಮಲ್, ರಾಜೀವ್ ಹಾಗೂ ಜೇಕಬ್ ಅಮೊಜ್ ಅವರನ್ನೊಳಗೊಂಡ ತಂಡ ಏಷ್ಯನ್ ದಾಖಲೆ ನಿರ್ಮಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಫಸ್ಟ್ ಲೆಗ್’ನಲ್ಲಿ ಓಡಿದ್ದ ಅನಸ್ 45.6 ಸೆಕಂಡ್, ಬಳಿಕ ನಿರ್ಮಲ್ 45 ಸೆಕೆಂಡ್, ರಾಜೀವ್ 44.8 ಸೆಕೆಂಡ್ ಹಾಗೂ ಕೊನೇಯದಾಗಿ ಓಡಿದ ಜೇಕಬ್ 44.68 ಸೆಕೆಂಡ್’ಗಳಲ್ಲಿ ಓಟ ಮುಗಿಸಿದ್ದರು.
19 ದೇಶಗಳು ಭಾಗವಹಿಸಿದ್ದ 4×400 ರಿಲೇಯಲ್ಲಿ ಭಾರತ ಒಟ್ಟಾರೆಯಾಗಿ 9 ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ.