Home ಟಾಪ್ ಸುದ್ದಿಗಳು ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಪ್ರಕಟ; ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ 2ರವರೆಗೆ ಅವಕಾಶ

ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಪ್ರಕಟ; ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ 2ರವರೆಗೆ ಅವಕಾಶ

► ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ

ಬೆಂಗಳೂರು: ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಮತ್ತು ರಾಜ್ಯಾದ್ಯಂತ ನೈಟ್ ಕರ್ಫ್ಯೂ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆ ರಾತ್ರಿ ಕರ್ಫ್ಯೂ ಇರಲಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳು ಮತ್ತು ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಇತರ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ ಮದುವೆ, ಕುಟುಂಬದ ಕಾರ್ಯಕ್ರಮಗಳನ್ನು 100 ಜನರಿಗೆ ಸೀಮಿತಗೊಳಿಸಿ ಆಯೋಜಿಸಬಹುದು. ಆದರೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತ್ಯ ಸಂಸ್ಕಾರಕ್ಕೆ ಗರಿಷ್ಠ 20 ಮಂದಿ ಸೇರಲು ಅನುಮತಿಸಲಾಗಿದೆ.


ಪ್ರಾರ್ಥನಾ ಮಂದಿರ, ಮಸೀದಿ, ಚರ್ಚ್, ದೇವಸ್ಥಾನ, ಗುರುದ್ವಾರ ಮತ್ತು ಇತರ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಆದರೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಆದಾಗ್ಯೂ, ಜಾತ್ರೆ, ದೇವಸ್ಥಾನದ ಮಹೋತ್ಸವ, ಮೆರವಣಿಗೆ ಮತ್ತಿತರ ಸಮಾವೇಶಗಳಿಗೆ ಅವಕಾಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


ಕೇಂದ್ರ, ರಾಜ್ಯ ಸರ್ಕಾರಗಳ ಎಲ್ಲಾ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಅಗತ್ಯ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು. ಅವರ ಕಚೇರಿಯ ಅಧಿಕೃತ ಗುರುತಿನ ಚೀಟಿಯೊಂದಿಗೆ ಅವರು ಓಡಾಡಬಹುದು. ರೋಗಿಗಳು ಮತ್ತು ಅವರ ಸಂಬಂಧಿಕರು ನಿರ್ದಿಷ್ಟ ದಾಖಲೆಯೊಂದಿಗೆ ಆಸ್ಪತ್ರೆಗಳಿಗೆ ಹೋಗಬಹುದು, ಲಸಿಕೆ ಹಾಕಲು ಸಾರ್ವಜನಿಕರು ದಾಖಲೆಯೊಂದಿಗೆ ಲಸಿಕಾ ಕೇಂದ್ರಗಳಿಗೆ ಹೋಗಬಹುದು.


ಅಗತ್ಯ ವಸ್ತುಗಳು, ದಿನಸಿ ಅಂಗಡಿ, ಹಣ್ಣು ಹಂಪಲು, ತರಕಾರಿ, ಮಾಂಸ, ಮೀನು, ಡೈರಿ, ಹಾಲಿನ ಬೂತ್ , ಪಶು ಆಹಾರದ ಅಂಗಡಿಗಳು ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ತೆರೆಯಬಹುದು. ಬೀದಿ ಬದಿ ವ್ಯಾಪಾರಿಗಳು, ಪಡಿತರ ಅಂಗಡಿಗಳು, ಮದ್ಯದ ಅಂಗಡಿಗಳು ಕೂಡ ಮಧ್ಯಾಹ್ನ 2ರವರೆಗೆ ಕಾರ್ಯಾಚರಿಸಬಹುದು. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಪಾರ್ಸೆಲ್ ಸೇವೆ ಮಾತ್ರ ಒದಗಿಸಬಹುದು. ರೈಲು ಮತ್ತು ವಿಮಾನ ಸೇವೆ ಅನುಮತಿಸಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಖಾಸಗಿ ವಾಹನಗಳು ಅಗತ್ಯ ದಾಖಲೆಗಳೊಂದಿಗೆ ಮಾತ್ರ ಸಂಚರಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯುಕ್ತರು, ಜಿಲ್ಲೆಗಳಲ್ಲಿ ಡಿಸಿಗಳು ತಮ್ಮ ವ್ಯಾಪ್ತಿಯಲ್ಲಿ ಮಾರ್ಗಸೂಚಿಯನ್ನು ಜಾರಿಗೊಳಿಸಬೇಕು ಎಂದು ತಿಳಿಸಲಾಗಿದೆ.

Join Whatsapp
Exit mobile version