ಬೆಂಗಳೂರು; ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಭಾರತ @75 ಸ್ವಾತಂತ್ರ್ಯ ಓಟವನ್ನು ನಾಳೆಯಿಂದ ಆಕ್ಟೋಬರ್ 2 ಗಾಂಧಿ ಜಯಂತಿಯವರೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿಂದು ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಸ್.ಪಿ. ಪಟ್ನಾಯಕ್, ನಿರ್ದೇಶಕ ಡಿ. ದಯಾನಂದ್ ಮತ್ತು ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶಕ ಕದ್ರಿ ನರಸಿಂಹಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಓಟದ ಕುರಿತು ವಿವರ ನೀಡಿದರು.
ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯುವ ಜನರಲ್ಲಿ ದೇಶಾಭಿಮಾನ ಮತ್ತು ದೈಹಿಕಶಕ್ತಿ ವೃದ್ಧಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯ 75 ಗ್ರಾಮಗಳಲ್ಲಿ ಈ ಓಟವನ್ನು ಆಯೋಜಿಸಲಾಗಿದೆ. ಪ್ರತಿ ಗ್ರಾಮದ 75 ಯುವಜನರು ಇದರಲ್ಲಿ ಪಾಲ್ಗೊಂಡು 7ಕಿಲೋಮೀಟರ್ ಓಟವನ್ನು ಕ್ರಮಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮ ನಾಳೆ ಕಾರವಾರ ಮತ್ತು ಯಾದಗಿರಿ ಜಿಲ್ಲೆಯಿಂದ ಆರಂಭಗೊಳ್ಳಲಿದ್ದು, ಆಕ್ಟೋಬರ್ 2ರಂದು ರಾಯಚೂರು ಮತ್ತು ಮೈಸೂರು ಜಿಲ್ಲೆಯಲ್ಲಿ ಸಮಾಪ್ತಿಗೊಳ್ಳಲಿದೆ. ದೇಶದ ಒಟ್ಟು 744 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಯುವ ಕಾರ್ಯಕ್ರಮವನ್ನು ನಾಳೆ ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಉತ್ತರ ಭಾರತದ ಜಿಲ್ಲೆಗಳಲ್ಲಿ ಉದ್ಘಾಟಿಸಲಿದ್ದಾರೆಂದು ಅವರು ಹೇಳಿದರು