ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಕಳೆದ ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರ ನೀಡಿದ್ದ ಸೇವಾಭದ್ರತೆ, ಸಮಾನ ವೇತನ, ಶ್ರೀನಿವಾಸಚಾರಿ ವರದಿ ಅನುಷ್ಠಾನ ಸೇರಿದಂತೆ ಕೆಲ ಬೇಡಿಕೆಗಳನ್ನು ಅತೀ ಶೀಘ್ರದಲ್ಲಿ ಈಡೇರಿಸಬೇಕೆಂದು ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಯಾಮೋಜಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತಮ್ಮ ಬೇಡಿಕೆಗಳ ಈಡೇರಿಕೆಗೆ ವಿಳಂಬ ಧೋರಣೆ ಅನುಸರಿಸಿದರೆ ನೌಕರರ ಕುಟುಂಬದೊಂದಿಗೆ ಸೇರಿ ಬರುವ ಅಧಿವೇಶನ ಸಂದರ್ಭದಲ್ಲಿ ಅನಿರ್ದಿಷ್ಟಾವಾಧಿ ಮುಷ್ಕರ ನಡೆಸುವುದಾಗಿ , ಒಂದು ವಾರದೊಳಗೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ರವರ ಸಮ್ಮುಖದಲ್ಲಿ ಆರೋಗ್ಯ ಸಚಿವರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕೊಟ್ಟ ಮಾತಿನಂತೆ ಮುಷ್ಕರ ವಾಪಸ್ ಪಡೆಯಲಾಗಿತ್ತು. ಭರವಸೆ ನೀಡಿ ಎರಡು ತಿಂಗಳು ಕಳೆದರೂ ಇದುವರೆಗೂ ಶ್ರೀನಿವಾಸಚಾರಿ ವರದಿ ಜಾರಿ ಆಗಿರುವುದಿಲ್ಲ. ಈ ವರದಿಯನ್ನು ಜಾರಿ ಮಾಡಿದರೆ ಗುತ್ತಿಗೆ ನೌಕರರು ದಸರಾ ಮತ್ತು ದೀಪಾವಳಿ ಹಬ್ಬವನ್ನು ನೆಮ್ಮದಿಯಿಂದ ಆಚರಣೆ ಮಾಡಲಿದ್ದೇವೆ ಇಲ್ಲವಾದರೆ ಕತ್ತಲಲ್ಲಿ ಕಾಲ ಕಳೆಯಲಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ಸಿಬ್ಬಂದಿಗಳ ನೇಮಕಾತಿಯಲ್ಲಿ ಕೃಪಾಂಕ ಹಾಗೂ ವಯೋಮಿತಿ ಸಡಿಲಿಕೆ ನೀಡಿರುವುದು ಸ್ವಾಗತಾರ್ಹವಾದದು. ಆದರೆ ಇಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದು ಎಂಬಿಬಿಎಸ್ ಮತ್ತು ತಜ್ಞ ವೈದ್ಯರ ನೇಮಕಾತಿಯಲ್ಲಿ ನೀಡಿದ ಪ್ರತಿ ವರ್ಷ ಕೃಪಾಂಕ ಹಾಗೂ ಗರಿಷ್ಠ ಕೃಪಾಂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಇದನ್ನು ಸರಿಪಡಿಸಿ ತಿದ್ದುಪಡಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೂಡಲೇ ಶೇ 15 ವೇತನ ಹೆಚ್ಚಳ, ಸೇವಾ ಭದ್ರತೆ,ಚ ಜೀವ ವಿಮೆ,ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ಆರೋಗ್ಯ ಭಾಗ್ಯ, ಹಾಗೂ ಇತರ ಬೇಡಿಕೆಗಳ ಅನುಷ್ಠಾನದ ಆದೇಶ ನೀಡಿ ನೌಕರರ ಹಿತಕಾಯಬೇಕೆಂದು ಹೇಳಿದರು.