ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ಇರುವ ಈ ದೇಶದಲ್ಲಿ ಬದಲಾವಣೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಇಲ್ಲಿ ಬಹು ಸಂಸ್ಕೃತಿ ಇರುವುದರಿಂದ ತಕ್ಷಣದ ಬದಲಾವಣೆ ಸಾಧ್ಯವಿಲ್ಲ. ಬದಲಾವಣೆಯಾಗಬೇಕೆಂದರೆ ಶಿಕ್ಷಣ ಮುಖ್ಯವಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬದಲಾವಣೆ ತರಬೇಕಿದೆ. ಸಾಮಾಜಿಕ ನ್ಯಾಯ ಕೊಡುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಸಮಾಜವಾದಿ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ಕೋಮುವಾದದತ್ತ ಮುಖ ಮಾಡಿರುವುದು ಅತ್ಯಂತ ದುರಾದೃಷ್ಟಕರ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಜೀವನದ ಅತ್ಯಂತ ಸೌಭಾಗ್ಯದ ಕ್ಷಣವೆಂದರೆ ಭೂ ರಹಿತರಿಗೆ ಭೂಮಿ ಕೊಡಿಸಿದ್ದು. ಭೂಮಿ ಕಳೆದುಕೊಂಡ ಭೂ ಮಾಲೀಕರು ಇಂದಿಗೂ ಕೂಡ ಕಾಗೋಡು ಕಾಲು ಮುರೀಬೇಕು ಎಂದು ಕಾಯುತ್ತಿದ್ದಾರೆ. ಆದರೆ ಹೋರಾಟದಿಂದ ಫಲ ಕಂಡವರು ನೆನಪಿಟ್ಟುಕೊಂಡರೆ ಸಾಕು’ ಎಂದು ಹೇಳಿದರು.