Home ಟಾಪ್ ಸುದ್ದಿಗಳು ದೇಶದ ಗಣರಾಜ್ಯ ವ್ಯವಸ್ಥೆಯ ಉಳಿವಿಗೋಸ್ಕರ ಸರ್ವ ತ್ಯಾಗಕ್ಕೂ ಸಿದ್ಧರಾಗಿ: ಕಾರ್ಯಕರ್ತರಿಗೆ ಇಲ್ಯಾಸ್ ಮುಹಮ್ಮದ್ ಕರೆ

ದೇಶದ ಗಣರಾಜ್ಯ ವ್ಯವಸ್ಥೆಯ ಉಳಿವಿಗೋಸ್ಕರ ಸರ್ವ ತ್ಯಾಗಕ್ಕೂ ಸಿದ್ಧರಾಗಿ: ಕಾರ್ಯಕರ್ತರಿಗೆ ಇಲ್ಯಾಸ್ ಮುಹಮ್ಮದ್ ಕರೆ

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷ ಸಮಾವೇಶ ಕಾರ್ಯಕ್ರಮವು ಕ್ಷೇತ್ರಾಧ್ಯಕ್ಷರಾದ ಮೂನಿಷ್ ಆಲಿ ಅವರ ಅಧ್ಯಕ್ಷತೆಯಲ್ಲಿ ಎಸ್ ಎಸ್ ಆಡಿಟೋರಿಯಂ ಆಲಡ್ಕದಲ್ಲಿ ನಡೆಯಿತು.

ಪ್ರಾಸ್ತಾವಿಕ ಭಾಷಣ ಮಾಡಿದ ಮೂನಿಷ್ ಆಲಿ ‘ ಮುಂಬರುವ ಲೋಕಸಭಾ ಚುನಾವಣೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಮೋದಿಯನ್ನು ಕೇಂದ್ರೀಕರಿಸಿಕೊಂಡು ಪರ – ವಿರೋಧದ ಮೂಲಕ ಚುನಾವಣಾ ಪ್ರಚಾರ ನಡೆಸುತ್ತಿರುವ ಈ ಹೊಸ್ತಿಲಲ್ಲಿ, ಜ್ವಲಂತ ಸಮಸ್ಯೆಗಳ ವಿರುದ್ಧ ಸದಾ ಜನಪರ ಹೋರಾಟದಲ್ಲಿ ನಿರತವಾಗಿರುವ ಎಸ್ ಡಿ ಪಿ ಐ ಪಕ್ಷವು ಜನರ ಮನದಾಳದಲ್ಲಿ  ವಿಶೇಷವಾಗಿ ಪರಿಗಣಿಸಲಿದೆ’ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ’ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ಮಾಯವಾಗುತ್ತದೆ. ಸತ್ಯ ಮತ್ತು ಮಿಥ್ಯೆಯ ನಡುವಿನ ಹೋರಾಟದ ಈ ನಿರ್ಣಾಯಕ ಹಂತದಲ್ಲಿ ಎಲ್ಲಾ ಕಾರ್ಯಕರ್ತರು ತ್ಯಾಗ ಮತ್ತು ಬಲಿದಾನಕ್ಕೆ ಸಿದ್ಧರಾಗಬೇಕು’ ಎಂದು ಕರೆ ಕೊಟ್ಟರು.

ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಮಾತನಾಡಿ ‘ದೇಶದಲ್ಲಿ ನಡೆದ ಎಲ್ಲಾ ಮಹಿಳಾ ದೌರ್ಜನ್ಯದ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದೆ. ಕರ್ನಾಟಕದಲ್ಲಿ ಕೋಮುವಾದಿ ಭಾಷಣಕಾರ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅಸಹ್ಯವಾಗಿ ಭಾಷಣ ಮಾಡಿದಾಗ ಕೂಡಾ ವಿಮ್ ಮೊತ್ತ ಮೊದಲಿಗೆ ಪ್ರತಿಭಟನೆ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಮಹಿಳೆಯರ ನಾಡಿ ಮಿಡಿತದಲ್ಲಿ ಶೋಷಿತರ ಪಕ್ಷ ಎಸ್ ಡಿ ಪಿ ಐ ಯ ಒಲವು ಇದೆ ಎಂದು ಹೇಳಿದರು.

ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಪೊನ್ನೋಡಿ ಮತ್ತು ರಿಯಾಜ್ ಕಡಂಬು ರವರು ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಆಡಳಿತ ಮತ್ತು ವಿರೋಧ ಪಕ್ಷದ ವೈಫಲ್ಯತೆ ಬಗ್ಗೆ ಮಾತಾಡಿ, ಮುಂಬರುವ ಲೋಕಸಭಾ ಚುನಾವಣೆಗೆ ತಯಾರಾಗಲು ಹುರಿದುಂಬಿಸಿದರು.

ಸಮಾರೋಪ ಭಾಷಣವನ್ನು ಮಾಡಿದ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಪ್ರಯತ್ನವನ್ನು ನಿರಂಕುಶವಾದಿಗಳು ನಡೆಸುತ್ತಿದ್ದಾರೆ. ಇದಕ್ಕಿಂತ ದೊಡ್ಡ ನಿರಂಕುಶವಾದಿಗಳ ಅಂತ್ಯ ಶೋಚನೀಯವಾಗಿದನ್ನು ಚರಿತ್ರೆಯ ಪುಟಗಳಲ್ಲಿ ನಾವು ಕಾಣಬಹುದು. ಆದ್ದರಿಂದ ಹೋರಾಟದಲ್ಲಿ ದೃಢವಾಗಿ ನಿಲ್ಲಬೇಕಿದೆ’ ಎಂದರು.

ಮುಖ್ಯ ಅತಿಥಿಗಳಾಗಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಮೂಸಬ್ಬ, ಯೂಸುಫ್ ಆಲಡ್ಕ, ಅಬೂಬಕ್ಕರ್ ಮದ್ದ, ಬಶೀರ್ ಬೊಳ್ಳಾಯಿ, ವಿಮ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನೌರಿನ್ ಆಲಂಪಾಡಿ, ಜಿಲ್ಲಾ ಸಮಿತಿ ಸದಸ್ಯೆ ಝಹನಾ, ವಿಮ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷೆ ಶಾಕಿರಾ, ಕಾರ್ಯದರ್ಶಿ ಫೌಝಿಯಾ ಮತ್ತು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸಾಹುಲ್ ಎಸ್ ಎಚ್ ಉಪಸ್ಥಿತರಿದ್ದರು.

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಸ್ವಾಗತಿಸಿ, ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಮುಬಾರಕ್ ಗೂಡಿನ ಬಳಿ ವಂದಿಸಿದರು. ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ ನಿರೂಪಿಸಿದರು.

Join Whatsapp
Exit mobile version