ಭುವನಗಿರಿ: ಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧವಾಗಿದೆ. ಆದರೂ ಕೂಡ ಈ ರೀತಿ ಲಿಂಗ ಪತ್ತೆ ಮಾಡಿ, ರಾತ್ರೋರಾತ್ರಿ ಮಹಿಳೆಗೆ ಗರ್ಭಪಾತ ಮಾಡುತ್ತಿದ್ದ ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದ್ದಾರೆ.
ಇಲ್ಲಿನ ಆಸ್ಪತ್ರೆಯೊಂದರಲ್ಲಿ ಅಕ್ರಮವಾಗಿ ಗರ್ಭಿಣಿಯರಿಗೆ ಲಿಂಗ ಪತ್ತೆ ಮಾಡಿ, ಭ್ರೂಣವೂ ಹೆಣ್ಣೆಂದು ತಿಳಿದ ಕೂಡಲೇ ಅದರ ಗರ್ಭಪಾತಕ್ಕೆ ಮುಂದಾಗುತ್ತಿದ್ದ ಘಟನೆ ಕುರಿತು ತಿಳಿದು ಬಂದಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಸ್ಒಟಿ ಪೊಲೀಸರು ರಾತ್ರಿ 10 ಗಂಟೆ ಸುಮಾರಿಗೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ರಾಚಕೊಂಡ ಎಸ್ಒಟಿ ಪೊಲೀಸರ ನೇತೃತ್ವದಲ್ಲಿ ದಾಳಿ ಮಾಡಿದಾಗ, ಡಾ ಹಿರೇಕರ್ ಶಿವಕುಮಾರ್, ಇಬ್ಬರು ಮಹಿಳೆಯರಿಗೆ ಗರ್ಭಪಾತ ಮಾಡಿಸಿರುವುದು ಪತ್ತೆಯಾಗಿದೆ. ತಕ್ಷಣಕ್ಕೆ ವೈದ್ಯರು ಸೇರಿದಂತೆ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ ಭ್ರೂಣಗಳನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಅಕ್ರಮವಾಗಿ ಗರ್ಭಪಾತ ಮಾಡುತ್ತಿದ್ದ ಡಾ. ಶಿವಕುಮಾರ್ ಅವರನ್ನು ಭುವನಗಿರಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ರಿಮಾಂಡ್ಗೆ ಕಳುಹಿಸಲಾಗಿದೆ ಎಂದು ಇನ್ಸ್ಪೆಕ್ಟರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಸಿದಾಗ, ಆಸ್ಪತ್ರೆಯ ಪಕ್ಕದಲ್ಲಿರುವ ಎಸ್ಎಲ್ಎನ್ ಪ್ರಯೋಗಾಲಯದಲ್ಲಿ ಲಿಂಗ ಪತ್ತೆ ನಡೆಸಲಾಗುತ್ತಿತ್ತು. ಬಳಿಕ ಈ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಗರ್ಭಪಾತ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಪ್ರಯೋಗಾಲಯ ವ್ಯವಸ್ಥಾಪಕ ಮತ್ತು ರೇಡಿಯಾಲಜಿಸ್ಟ್ ಡಾ. ಪಾಂಡುಗೌಡ ಹಾಗೂ ಶಿವಕುಮಾರ್ ಅವರ ಪತ್ನಿ ಡಾ. ಗಾಯತ್ರಿ ವಿರುದ್ಧ ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
