ಕೆಂಪಣ್ಣ ಆರೋಪದಲ್ಲಿ ಹುರುಳಿಲ್ಲ ಎಂದಾದರೆ ಅವರ ವಿರುದ್ಧ ಇದುವರೆಗೂ ಯಾಕೆ ಪ್ರಕರಣ ದಾಖಲಿಸಿಲ್ಲ?: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷವಾಗಿದೆ. ಈಗ ಮುಖ್ಯಮಂತ್ರಿಗಳು ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದಾದರೆ ಅವರ ವಿರುದ್ಧ ಇದುವರೆಗೂ ಯಾಕೆ ಪ್ರಕರಣ ದಾಖಲಿಸಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪಣ್ಣ ಅವರು ತಮ್ಮ ಬಳಿ ಎಲ್ಲ ರೀತಿಯ ಆಧಾರ ಇದೆ ಎಂದು ಹೇಳುತ್ತಿದ್ದರೂ ಯಾಕೆ ತನಿಖೆ ಮಾಡುತ್ತಿಲ್ಲ? ನೀವು ಪ್ರಾಮಾಣಿಕರಾಗಿದ್ದರೆ ಭಯ ಯಾಕೆ? ಅವರ ಪಕ್ಷದ ಕಾರ್ಯಕರ್ತನಿಗೆ ಅನ್ಯಾಯವಾಗಿದ್ದು, ಆ ಪ್ರಕರಣದಲ್ಲಿ ಸಚಿವರ ತನಿಖೆ ಆಗುವ ಮುನ್ನವೇ ಮುಖ್ಯಮಂತ್ರಿಗಳು ಕ್ಲೀನ್ ಚಿಟ್ ನೀಡಿದ್ದಾರೆ. ಈ ಸಮಯದಲ್ಲಿ ಯಾರು ನ್ಯಾಯ ಒದಗಿಸುತ್ತಾರೆ. ಇದು ಮಹಾಪರಾಧ. ತಪ್ಪಿತಸ್ಥರ ವಿರುದ್ಧ ತನಿಖೆ ಮಾಡದೆ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಮುತ್ತುರತ್ನಗಳನ್ನು ಅವರು ತಮ್ಮ ಬಳಿ ಇಟ್ಟುಕೊಳ್ಳಲಿ. ನಂತರ ನಾನು ಮಾತನಾಡುತ್ತೇನೆ’ ಎಂದು ತಿಳಿಸಿದರು.


ಕೆಂಪಣ್ಣ ಅವರು ಲೋಕಾಯುಕ್ತ ಬಳಿ ಸಾಕ್ಷಿ ನೀಡಲಿ ಎಂಬ ಮುಖ್ಯಮಂತ್ರಿಗಳ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೆಂಪಣ್ಣ ಅವರು ನಿಮಗೆ ಹಾಗೂ ಪ್ರಧಾನಿಗಳಿಗೆ ಪತ್ರ ಬರೆದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂಬುದು ನಮ್ಮ ಪ್ರಶ್ನೆ. ಆಗಲೇ ನೀವು ಲೋಕಾಯುಕ್ತ ಕೈಯಲ್ಲಿ ತನಿಖೆ ಮಾಡಿಸಬೇಕಿತ್ತು. ನೀವು ತಪ್ಪು ಮಾಡಿಲ್ಲ ಎಂದಾದರೆ ನ್ಯಾಯಾಂಗ ತನಿಖೆ ಮಾಡಿಸಿ. ಭಯ ಯಾಕೆ? ಇವರು ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ’ ಎಂದರು.
ಕೇಂದ್ರ ಸರ್ಕಾರ ಒಪ್ಪಿದರೆ ಅನ್ನ ಭಾಗ್ಯ ಯೋಜನೆ ನಿಲ್ಲಿಸುತ್ತೇವೆ ಎಂಬ ಸಚಿವ ಕತ್ತಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅಕ್ಕಿ, ಅನ್ನ ನೀಡುವುದು ಸಂವಿಧಾನದಲ್ಲಿದೆ. ಆಹಾರ ಹಕ್ಕು ಕಾಯ್ದೆ ಮಾಡಲಾಗಿದೆ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಈ ಕಾಯ್ದೆ ತಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಣ ಹಾಕಿ ಈ ಯೋಜನೆ ಜಾರಿಗೆ ತರಲಾಗಿದೆ. ಹಾಗೆಂದು ಭ್ರಷ್ಟಾಚಾರ ವಿಚಾರ ಬಿಡುವುದಿಲ್ಲ. ನಾನಾ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳೇ ವರದಿ ಮಾಡುತ್ತಿವೆ’ ಎಂದರು.

- Advertisement -


ಕೆಂಪಣ್ಣ ಅವರು ಮುನಿರತ್ನ ಅವರ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, ‘ನೀವು ಹೇಳುತ್ತಿರುವ ಸಚಿವರ ವಿರುದ್ಧ ಚಾಮರಾಜನಗರ ಜಿಲ್ಲೆ ರೈತರು ನನಗೆ ನೇರವಾಗಿ ಹೇಳಿದ್ದಾರೆ. ಸರ್ಕಾರದಿಂದ ಬರುವ ಪರಿಹಾರ ಹಣದಲ್ಲಿ ಸಚಿವರು ಶೇ.8 ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.

Join Whatsapp
Exit mobile version