►ಒಂದು ನಿರ್ಲಜ್ಜ ಕೋಮುರಾಜಕಾರಣ
ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಕ್ಷುದ್ರ ರಾಜಕೀಯದ ಅಂಕಣವಾಗಿಬಿಟ್ಟಿದೆ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷದ ಹೊತ್ತಿರುವಾಗಲೇ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದು ಹೋದ ಹರ್ಷನ ಹತ್ಯೆ ಮತ್ತದೆ ಕೋಮುರಾಜಕಾರಣಕ್ಕೆ ನೀರು-ಗೊಬ್ಬರದಂತೆ ಬಳಕೆಯಾಗುತ್ತಿರುವುದರಲ್ಲಿ ಶಿವಮೊಗ್ಗದ ಕೋಮುರಾಜಕಾರಣದ ಇತಿಹಾಸ ಅರಿತವರಿಗೆ ಆಶ್ಚರ್ಯಪಡುವಂತದ್ದೇನೂ ಇರಲಾರದು. 1940 ರಿಂದ ಆರಂಭಗೊಂಡು ಫೆ.20, 2022ರ ವರೆಗಿನ ಹರ್ಷನ ಹತ್ಯೆಯವರೆಗೂ ನಡೆದ ಶಿವಮೂರ್ತಿ, ಉಪನ್ಯಾಸಕ ಗೋವಿಂದರಾಜ್, ಶಿವಕುಮಾರ್, ಸಯ್ಯದ್ ಫರೀದ್, ಗೋಕುಲ, ವಿಶ್ವನಾಥಶೆಟ್ಟಿ ಅವರ ಕೊಲೆಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಅಧಿಕಾರದ ಬೆಳೆ ಬೆಳೆದ ನಿರ್ಲಜ್ಜ ರಾಜಕೀಯವೇ ಇಂದಿಗೂ ಮುಂದುವರಿದಿದೆ.
ಸಾವರ್ಕರ್ ಹಿಂದೂ ಸಮಾಜೋತ್ಸವದ ನೆಪದಲ್ಲಿ ಶಿವಮೊಗ್ಗಕ್ಕೆ ಕಾಲಿಟ್ಟ (1944) ಘಳಿಗೆಯೇ ಈ ಸಮಾಜವಾದಿ ನೆಲ ಕೋಮುವಾದಿ ನೆಲವಾಗಿ ನೆತ್ತರು ಕುಡಿಯಲಾರಂಭಿಸಿತು. ಹಿಂದೂ ಮತೀಯವಾದಕ್ಕೆ ಪ್ರತಿಯಾಗಿ ಮುಸ್ಲಿಮ್ ಮತೀಯವಾದವು ಕಾಣಿಸಿಕೊಂಡಿತು ಕೂಡ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗಳು ಕೋಮುಗಲಭೆಯ ಅಖಾಡಗಳಾಗಿ ಮಾರ್ಪಟ್ಟವು, ರಾಜಕೀಯ ಅಸ್ತಿತ್ವ ಕಂಡು ಕೊಳ್ಳುವ ನೆತ್ತರಿನ ಹೆದ್ದಾರಿಗಳಾಗಿ ಕಂಡವು. ಒಂದು ಹಂತದಲ್ಲಿ ಇದು ಧರ್ಮದ್ವೇಷದ ದಾಳಿಗಳು, ಲೂಟಿ, ಕೊಲೆ ಹಿಂಸೆ, ಜನಾಂಗ ದ್ವೇಷದ ಉತ್ತುಂಗಕ್ಕೆ ತಲುಪಿದಾಗ 1996 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಎಂ. ಲಕ್ಷ್ಮೀನಾರಾಯಣ ಅವರು ಆರು ವರ್ಷಗಳ ಕಾಲ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯನ್ನೇ ನಿಷೇಧಿಸಿದ್ದರು. ಹಿಂದೂ ಮುಸ್ಲಿಂ ಹುಡುಗರ ನಡುವೆ ಬೇರಾವ ಕಾರಣಕ್ಕಾದರೂ ಸಣ್ಣಪುಟ್ಟ ಗಲಾಟೆಗಳಾದರೆ ಕ್ಷಣ ಮಾತ್ರದಲ್ಲಿ ಅದಕ್ಕೆ ಕೋಮುಬಣ್ಣ ಕಟ್ಟಿ ಗಲಭೆ ಸೃಷ್ಟಿಸುವ ಹುನ್ನಾರಗಳು ಈ ಹೊತ್ತಿಗೂ ನಿಂತಿಲ್ಲ.
ಸಮಾಜವಾದಿ ನೆಲದಲ್ಲಿ ಕೋಮುವಾದಿ ರಾಜಕಾರಣವನ್ನು ಬಿತ್ತಿದ ಅಪಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇಂದು ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದರೆ ಅದು ಕೋಮುರಾಜಕಾರಣದ ಫಲವೇ ಆಗಿದೆ. ಬಡವರು, ಅಮಾಯಕರ ಹೆಣಗಳ ಮೇಲೆ ಕ್ಷುದ್ರ ರಾಜಕಾರಣವೊಂದು ನಡೆಯುತ್ತಲೆ ಇದೆ. 1989 ಕಾಂಗ್ರೆಸ್ ಬಲಿಷ್ಠವಾಗಿದ್ದ ಕಾಲವದು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಚ್ ಶ್ರೀನಿವಾಸ್ ಎಂಬ ಬಲಿಷ್ಠ ಕಾಂಗ್ರೆಸ್ ನಾಯಕನನ್ನು ಮುಸ್ಲಿಮರ ಪಕ್ಷಪಾತಿ (ಸೂಳೆಬೈಲು ಪ್ರಕರಣ) ಎಂದೆ ಅಪಪ್ರಚಾರ ಮಾಡಿದ ಬಿಜೆಪಿಗರು ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಂಡು ಸೋಲಿಸಿಬಿಟ್ಟಿತು. ಮೊಟ್ಟಮೊದಲ ಬಾರಿಗೆ ಕೆ.ಎಸ್. ಈಶ್ವರಪ್ಪ ಕೇವಲ ಸಾವಿರ ಓಟುಗಳ ಅಂತರದಲ್ಲಿ ಗೆದ್ದು ಬಿಟ್ಟರು. ಶಿವಮೊಗ್ಗದಲ್ಲಿ ಅವತ್ತಿಗೆ ಕುಸಿದು ನೆಲಕಚ್ಚಿದ ಸಕ್ಯೂಲರ್ ರಾಜಕಾರಣ ಇಂದಿಗೂ ಸಂಘಪರಿವಾರ, ಬಿಜೆಪಿಗಳ ಕೋಮು ರಾಜಕಾರಣದ ಮುಂದೆ ಏಗುತ್ತಲೇ ಇದೆ.
ಹಿಂದೆ ಶಿವಮೂರ್ತಿ, ಶಿವಕುಮಾರ, ಗೋಕುಲ, ವಿಶ್ವನಾಥ್ ಶೆಟ್ಟಿಯ ಹೆಣಗಳನ್ನು ಮುಂದಿಟ್ಟುಕೊಂಡೆ ರಾಜಕೀಯ ಬೇಳೆ ಬೇಯಿಸಿಕೊಂಡ ಬಿಜೆಪಿ ಈಗ ಹರ್ಷ ಎಂಬ ಬಡ್ಡಿಂಗ್ ರೌಡಿಯ ಹತ್ಯೆಯನ್ನು ಮುಂದಿಟ್ಟುಕೊಂಡು ನೆಲೆ ಉಳಿಸಿಕೊಳ್ಳಲು ಹೋರಾಡುತ್ತಿದೆ. ಆಗಸ್ಟ್ 26, 2001 ಶಿವಮೊಗ್ಗದ ಭರ್ಮಪ್ಪನಗರದ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆಯಲ್ಲಿ ಬಜರಂಗದಳದ ಪುಂಡಾಟಕ್ಕೆ ನಗರದಲ್ಲಿ ಕೋಮುಗಲಭೆ ಭುಗಿಲೆದ್ದಿತು. ಹಿಂದೂ-ಮುಸ್ಲಿಮ್ ಸಮುದಾಯಗಳಲ್ಲಿನ ಮತಾಂಧರು ಬೀದಿಗಿಳಿದು ಬಡಿದಾಡಿಕೊಂಡು ಬಿಟ್ಟರು. ಕರ್ಪ್ಯೂ ವಿಧಿಸಿದ್ದ ಆ ರಾತ್ರಿ ಇದೇ ಧರ್ಮಪ್ಪ ನಗರದ ನಿವಾಸಿ ಅಮಾಯಕ ಸಯ್ಯದ್ ಫರೀದ್ ಲಾರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಮತಾಂಧರ ದಾಳಿಗೆ ತುತ್ತಾಗಿ ಜೀವ ಬಿಟ್ಟಿದ್ದ, ಇದು ಕೋಮುಗಲಭೆಗೆ ಇನ್ನಷ್ಟು ತುಪ್ಪ ಸುರಿದಂತಾಯಿತು. ಈ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಿದ್ದರೆ ಶಿವಮೊಗ್ಗ ಬಜರಂಗದಳದ ಮುಂಚೂಣಿ ನಾಯಕರೆಲ್ಲಾ ಜೈಲು ಸೇರಬೇಕಿತ್ತು. ಆದರೆ ಅಂತಹ ನಿಷ್ಪಕ್ಷಪಾತ ತನಿಖೆಯನ್ನು ಅವತ್ತಿನ ಎಸ್.ಎಂ ಕೃಷ್ಣ ನೇತೃತ್ವದ ಸರ್ಕಾರ ನಡೆಸಲೇ ಇಲ್ಲ. ಬದಲಾಗಿ ಸಯ್ಯದ್ ಫರೀದ್ ನ ಕೊಲೆ ಪ್ರಕರಣವನ್ನು ೧೧ ಜನ ದಲಿತ, ಹಿಂದುಳಿದ ವರ್ಗಗಳ ನಿರಪರಾಧಿ ಬಡ ಹುಡುಗರ ತಲೆಗೆ ಕಟ್ಟಿ ಕೈತೊಳೆದುಕೊಂಡಿತು.
ಈಗ ಹರ್ಷನ ಪ್ರಕರಣನ್ನೇ ಮುಂದಿಟ್ಟುಕೊಂಡು ಇಡೀ ರಾಜ್ಯದಲ್ಲೆ ಹಿಂದೂ ಮತಗಳ ಕ್ರೋಢೀಕರಣಕ್ಕೆ ಮುಂದಾಗಿರುವ ಬಿಜೆಪಿಗರು ಹರ್ಷನ ಹತ್ಯೆಯ ಸತ್ಯವನ್ನು ಮರೆಮಾಚಿ ಕೋಮುರಾಜಕಾರಣದ ಅಬ್ಬರದಲ್ಲಿ ತೊಡಗಿಸಿದ್ದಾರೆ. ಬಜರಂಗದಳದಲ್ಲಿ ಗುರುತಿಸಿಕೊಂಡು ಸೋಷಿಯಲ್ ಮಿಡಿಯಾಗಳಲ್ಲಿ ‘ಹಿಂದೂ ಹರ್ಷ’ ಎಂದೇ ಮತೀಯ ಅಮಲಿನಲ್ಲಿ ಮುಸ್ಲಿಮ್ ವಿರೋಧಿ ಕಡು ದ್ವೇಷವನ್ನು ಕಾರುತ್ತಿದ್ದನು. ಆತ ಮಸೀದಿಯೊಂದರ ಗೋಡೆ ಮೇಲೆ ಹಂದಿಯ ಚಿತ್ರದ ಪೋಸ್ಟರ್ ಅಂಟಿಸಿ ಸೌಹಾರ್ದತೆಗೆ ಕೊಳ್ಳಿ ಇಡುವ ಪ್ರಯತ್ನ ಕೂಡ ನಡೆಸಿದ್ದನು. ಇಂತಹ ಕಾರಣಗಳಿಗಾಗಿಯೇ ಆತನ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆರಕ್ಕೂ ಹೆಚ್ಚು ಕೇಸುಗಳಿದ್ದವು. ಒಂದು ಹಂತದಲ್ಲಿ ಹರ್ಷನನ್ನು ಗಡಿ ಪಾರು ಮಾಡುವ ಸಿದ್ಧತೆಯೂ ನಡೆದಿತ್ತು. ಆದರೆ ಆತನ ತಾಯಿ ಪೊಲೀಸರ ಮುಂದೆ ಮಂಡಿಯೂರಿ ‘ಮಗನನ್ನು ಯಾವುದೇ ಸಂಘಟನೆ, ಸಂಘರ್ಷಗಳಿಗೆ ಪಾಲುದಾರನನ್ನಾಗಿ ಮಾಡುವುದಿಲ್ಲ’ ಎಂದು ಮಾತುಕೊಟ್ಟು ಗಡಿಪಾರು ಶಿಕ್ಷೆಯಿಂದ ಉಳಿಸಿಕೊಂಡಿದ್ದರು. ಕುಟುಂಬಕ್ಕೆ ಒಬ್ಬನೇ ಗಂಡು ಮಗನಾಗಿದ್ದ ಹರ್ಷ ಮುಸ್ಲಿಂ ಹುಡುಗರ ಜೊತೆಯೇ ಹೊಳೆ ಸಾಲಿನಲ್ಲಿ ಇಸ್ಪೀಟ್ ಆಡುತ್ತಿದ್ದ. ಅಲ್ಲೂ ತಗಾದೆ ತೆಗೆದುಕೊಂಡಿದ್ದ, ಇಂತಹ ಪುಂಡಾಟಗಳಿಂದ ಜೈಲು ಸೇರಿದ್ದಾಗ ಜೈಲಿನಲ್ಲೆ ಇದ್ದ ಖಾಸೀಫ್‌ನೊಂದಿಗೆ ಕಿತ್ತಾಡಿಕೊಂಡಿದ್ದ. ಹರ್ಷ ಮತ್ತು ಖಾಸೀಫ್ ನಡುವೆ ವೈಯಕ್ತಿಕ ದ್ವೇಷವಿತ್ತು. ಕೆಲವು ದಿನಗಳ ಕಾಲ ಬಜರಂಗದಳದಿಂದ ದೂರವಿದ್ದ ಹರ್ಷ ಹಿಜಾಬ್ ವಿರೋಧಿ ಪ್ರತಿಭಟನೆಗಳಲ್ಲಿ ಕಾಣಿಸಿಕೊಂಡಿದ್ದ. ಹಿಂದೂ ಸಂಘಟನೆಗಳ ಮುಖಂಡರು ಕೊಟ್ಟ ಕೇಸರಿ ಶಾಲುಗಳನ್ನು ಕಾಲೇಜುಗಳಿಗೆ ನುಗ್ಗಿ ವಿದ್ಯಾರ್ಥಿಗಳಿಗೆ ಹಂಚತೊಡಗಿದ್ದ, ಇಂತಹ ಹುಂಬ ಹುಡುಗರನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಕಲೆ ಗೊತ್ತಿರುವ ಹಿಂದುತ್ವ ಮತೀಯವಾದಿಗಳಿಗೆ ಹರ್ಷ ಒಂದು ಅಸ್ತ್ರದಂತೆ ಬಳಕೆಯಾಗಿದ್ದ. ಹರ್ಷನನ್ನು ಮುಗಿಸಲು ಕಾಯುತ್ತಿದ್ದ ಖಾಸೀಫ್ ಗ್ಯಾಂಗ್‌ನ ಕೈಗೆ ಸಿಕ್ಕ ಹರ್ಷ ಹೆಣವಾಗಿ ಹೋಗಿಬಿಟ್ಟ.
ಹರ್ಷನ ಹತ್ಯೆಯನ್ನು ಅದೆಷ್ಟರ ಮಟ್ಟಿಗೆ ಬಿಜೆಪಿಗರು ಬಳಸಿಕೊಳ್ಳುತ್ತಿದ್ದಾರೆಂದರೆ ಆಡಳಿತ ರೂಢ ಬಿಜೆಪಿ ಸರ್ಕಾರ ಹರ್ಷನಿಗೆ 25 ಲಕ್ಷ. ರೂ. ಪರಿಹಾರ ಘೋಷಿಸುತ್ತದೆ. ಬಿಜೆಪಿಯ ರಾಜ್ಯಾಧ್ಯಕ್ಷನಿಂದ ಹಿಡಿದು ಘಟಾನುಘಟಿ ಸಚಿವರು, ಶಾಸಕರು, ಸಂಸದರು ಮುಗಿಬಿದ್ದು ಹರ್ಷನ ಮನಗೆ ಬಂದು ಹರ್ಷನ ಕುಟುಂಬಕ್ಕೆ ದುಡ್ಡು ಕೊಟ್ಟು ಹೋಗುತ್ತಿದ್ದಾರೆ. ಇದೆಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ರಾಜ್ಯದ ಅನೇಕ ಲಿಂಗಾಯಿತ ಮಠಾಧಿಪತಿಗಳು ಹರ್ಷನ ಮನೆಗೆ ಲಗ್ಗೆ ಹಾಕಿ ಹರ್ಷನ ಹತ್ಯೆ ಸಮಸ್ತ ಹಿಂದೂಗಳ ಮೇಲೆ ನಡೆದ ದಾಳಿ ಎಂಬಂತೆ ಮಾತಾಡಿದ್ದು ಎಲ್ಲವೂ ಬಿಜೆಪಿ ಪ್ರಾಯೋಜಿತವೆಂಬದನ್ನು ಮುಚ್ಚಿಡಲಾಗಲಿಲ್ಲ. 144 ಸೆಕ್ಷನ್ ಜಾರಿಯಲ್ಲಿದ್ದರೂ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಮುಂದೆ ನಿಂತು ಹರ್ಷನ ಅಂತ್ಯಸಂಸ್ಕಾರ ಪೂರ್ವ ಮೆರವಣಿಗೆ ಮುನ್ನಡೆಸಿದರು. ದಾರಿಯುದ್ದಕ್ಕೂ ಧರ್ಮದ ಅಫೀಮು ಕುಡಿದ ಕಿಡಿಗೇಡಿಗಳು ಅಲ್ಪಸಂಖ್ಯಾತರ ಮನೆ, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಿದರು. ಬೆಂಕಿ ಹಚ್ಚಿದರು. ಎಲ್ಲವೂ ಪ್ರಭುತ್ವದ ನೆರಳಿನಲ್ಲೆ, ಅದರ ಸೂಚನೆಯಂತೆ ನಡೆದು ಹೋಯಿತು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿಬೇಕಿಲ್ಲ.
ಸಮಾನತೆ, ಭ್ರಾತೃತ್ವದಂತಹ ಸಾಂವಿಧಾನಿಕ ಪ್ರತಿಜ್ಞೆಗಳನ್ನು ಸ್ವೀಕರಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಮುಸ್ಲಿಮರ ವಿರುದ್ಧ ಬೆಂಕಿಯುಗುಳುತ್ತಾ ಸಮುದಾಯ ದ್ವೇಷವನ್ನು ಪ್ರಚೋದಿಸಿದರು. ಇದು ದೇಶದ್ರೋಹಕ್ಕೆ ಸಮ ಎಂಬುದನ್ನು ಪೊಲೀಸ್ ಇಲಾಖೆ ನೆನೆಪಿಸಲಿಲ್ಲ. ತೀರ್ಥಹಳ್ಳಿಯಲ್ಲಿ ಹರ್ಷನ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಹತ್ಯೆಯ ನೈಜತೆಯನ್ನು ಬಯಲು ಮಾಡಿದ ಪತ್ರಕರ್ತರ ವಿರುದ್ಧ ದಾಳಿ ಎಚ್ಚರಿಕೆಗಳನ್ನು ಕೊಡಲಾಯಿತು. ಇದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರು. ಇದರಿಂದ ಸ್ಪಷ್ಟವಾಗುತ್ತಿರುವುದೇನೆಂದರೆ ಸರ್ಕಾರವೇ ಗಲಭೆಯನ್ನು ಪ್ರಾಯೋಜಿಸುವ ಹುನ್ನಾರ ನಡೆಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಹಿಂದೂ ಮತ ರಾಜಕಾರಣದ ಅಜೆಂಡಾವನ್ನು ಪ್ರತಿಪಾದಿಸಿದೆ.
ಸರ್ವಜನರ ಒಳಿತಿಗಾಗಿ ಹೋರಾಟಗಳಿಂದ ಅಧಿಕಾರ ಸಂಪಾದನೆ ಅಷ್ಟು ಸುಲಭವಲ್ಲ ಎಂದರಿತ ಬಿಜೆಪಿ ಅಧಿಕಾರ ಬೇಟೆಗೆ ಕಂಡು ಕೊಂಡ ದಾರಿಯೆಂದರೆ ಅದು ಧರ್ಮದ್ವೇಷ. ಅಲ್ವಸಂಖ್ಯಾತರ ವಿರುದ್ಧ ಬಹುಸಂಖ್ಯಾತ ಹಿಂದೂಗಳನ್ನು ಎತ್ತಿಕಟ್ಟಿ ಹಿಂದೂ ಮತಗಳ ಕ್ರೋಢೀಕರಣದ ಸುಲಭ ಮಾರ್ಗವನ್ನು ಕಂಡು ಕೊಂಡು ಬಿಟ್ಟಿದೆ. 90ರ ದಶಕದಲ್ಲಿ ರಾಮ ರಥಯಾತ್ರೆ ಮೂಲಕ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಬಿಜೆಪಿ ದೇಶದಲ್ಲಿ ಅಸಂಖ್ಯಾತ ಜನರ ಹೆಣಗಳ ಮೇಲೆ ಅಧಿಕಾರದ ಸೌಧವನ್ನು ಕಟ್ಟಿಕೊಂಡು ಆಳುತ್ತಿದೆ. ಕರ್ನಾಟಕದಲ್ಲಿ ಗುಜರಾತ್ ಮಾದರಿ ಕೋಮುಗಲಭೆಯನ್ನು ಹುಟ್ಟುಹಾಕುವ ದೊಡ್ಡ ಷಡ್ಯಂತ್ರ ಕಳೆದ 8 ವರ್ಷಗಳಿಂದ ನಡೆಯುತ್ತಿದೆ. ಕೊರೋನಾವನ್ನು ತಬ್ಲಿಘಿಗಳ ತಲೆಗೆ ಕಟ್ಟಿ ಜನಾಂಗ ದ್ವೇಷ ಹರಡಲು ಯತ್ನಿಸಿದ ಹಿಂದುತ್ವ ಮತೀಯ ಸಂಘಟನೆಗಳು ಎನ್‌ಆರ್‌ಸಿ/ಸಿಎಎ ಚಳವಳಿಗಳನ್ನು ಹಿಂದುತ್ವ ವಿರೋಧಿ, ದೇಶವಿರೋಧಿ ಎಂದು ಬಿಂಬಿಸುವ ವಿಫಲ ಯತ್ನ ನಡೆಸಿದವು. ತಮ್ಮದೇ ಪಕ್ಷದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲು ರಾಜ್ಯದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ ಪ್ರಯತ್ನಗಳು ನಡೆದಿದ್ದವು ಎಂಬುದನ್ನು ರಾಜ್ಯಗುಪ್ತಚರ ಇಲಾಖೆಯೇ ವರದಿ ಮಾಡಿತ್ತು ಕೂಡ. ಈಗ ಅಂತಹದ್ದೇ ಪ್ರಯತ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಫಲ ಸರ್ಕಾರ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ತನ್ನದೇ ಜನರ ನಡುವೆ ಧರ್ಮ, ಜಾತಿಗಳ ಹೆಸರಿನಲ್ಲಿ ಹಿಂಸೆಯನ್ನು ಬಿತ್ತುತ್ತದೆ ಎಂಬುದಕ್ಕೆ ಶಿವಮೊಗ್ಗದ ಗಲಭೆಯ ಘಟನಾವಳಿಗಳೇ ಸಾಕ್ಷಿ. ಇಲ್ಲಿ ಸಂವಿಧಾನದ ಮೂಲತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವರು ಅದರಂತೆ ನಡೆದುಕೊಳ್ಳುತ್ತಿಲ್ಲ. ಪ್ರಬಲವಾಗಿ ವಿರೋಧಿಸಬೇಕಾಗಿದ್ದ ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿ ಕೂತಿದೆ. ಆಳುವ ಪಕ್ಷಗಳ ಮುಖಂಡರಾದಿಯಾಗಿ ಅದರ ಕಾಲಾಳುಗಳೇ ಜನಾಂಗೀಯ ದ್ವೇಷವನ್ನು ಕಾರುತ್ತಾ ಶಾಂತಿ-ಸೌಹಾರ್ದತೆಯನ್ನು ಕದಡುತ್ತಿವೆ. ಕಾಯಬೇಕಾದವರೇ ಕೊಲ್ಲು, ಹೊಡಿ, ಬಡಿ ಎಂದು ಪ್ರಚೋದಿಸುತ್ತಿರುವುದು ಮುಂದಿನ ದಿನಗಳ ಅಪಾಯದ ಅಪಶಕುನದಂತೆ ಕಾಣುತ್ತಿದೆ. ಬಹುಸಂಖ್ಯಾತ ಹಿಂದೂಗಳ ಮತ ಕ್ರೋಢೀಕರಣಕ್ಕೆ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಬಿತ್ತಲಾಗುತ್ತಿದೆ. ಹರ್ಷನ ಹತ್ಯೆಯ ಸತ್ಯ ಸಮಾಧಿಯಾಗಿದ್ದು, ಹರ್ಷನ ಕುಟುಂಬಕ್ಕೆ ಕೋಟ್ಯಂತರ ರೂಪಾಯಿಗಳ ಪರಿಹಾರ ಹರಿದು ಬರುವಂತೆ ಮುತುವರ್ಜಿ ವಹಿಸಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಗೆ ಸತ್ತಮನೆಯಲ್ಲಿ ಬಂಡವಾಳ ಹೂಡುತ್ತಿದೆ.
ಹರ್ಷನ ಮನೆಗೆ ಗುಳೆಬಿದ್ದು ಬರುತ್ತಿರುವ ಬಿಜೆಪಿ ಮತ್ತಿತರ ಪ್ರಾಯೋಜಿತ ನಾಯಕರು, ಮಠಾಧೀಶರು ಸಾಂತ್ವನದ ನೆಪದಲ್ಲಿ ಲಕ್ಷ ಲಕ್ಷ ರೂ. ಹಣ ಕೊಟ್ಟು ಹೋಗಿದ್ದಾರೆ. ಹಿಂದುಳಿದ ವರ್ಗದ ದರ್ಜಿ ಸಮುದಾಯದ ಹರ್ಷ ಕುಟುಂಬ ಆರ್ಥಿಕವಾಗಿ ಕಡುಬಡವರೇನಲ್ಲ. ತಂದೆ ಟೈಲರಿಂಗ್ ಮಾಡುತ್ತಿದ್ದರೆ, ತಾಯಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಇಂತಹ ಕುಟುಂಬಕ್ಕೆ ಲಕ್ಷ, ಲಕ್ಷ ರೂ. ಹರಿದು ಬರುತ್ತಿದ್ದರೆ, 2015 ರಲ್ಲಿ ಕೊಲೆಯಾದ ವಿಶ್ವನಾಥ ಶೆಟ್ಟಿಯ ತಾಯಿ ಬೀದಿಯಲ್ಲಿ ಚಿಂದಿ ಆಯ್ದು ಮೊಮ್ಮಗನನ್ನು ಓದಿಸಲು ಪರದಾಡುತ್ತಿದ್ದಾಳೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ವಿಶ್ವನಾಥ್ ಶೆಟ್ಟಿ ಕೊಲೆ ಪ್ರಕರಣವನ್ನು ಮತೀಯ ರಾಜಕಾರಣಕ್ಕೆ ಬಳಸಿಕೊಂಡ ಬಿಜೆಪಿ ಉದ್ದೇಶ ಈಡೇರಿದ ಮೇಲೆ ಆ ಕುಟುಂಬವನ್ನೇ ಮರೆತು ಬಿಟ್ಟಿತು. ಇದೀಗ ಹರ್ಷ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಊರಿನ ತುಂಬಾ ಕೋಮುದ್ವೇಷ ಬಿತ್ತಲು ಆಡಳಿತ ರೂಢ ಪಕ್ಷದ ಶಾಸಕರು, ಸಂಸದರು ಹಗಲು ರಾತ್ರಿ ರಣೋತ್ಸಾಹದಲ್ಲಿದ್ದರೆ ಇತ್ತ ಸಮಾಜಸೇವಕ ಎಂ.ಶ್ರೀಕಾಂತ್ ಅವರು ವಿಶ್ವನಾಥ್ ಶೆಟ್ಟಿಯ ಜೋಪಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಗನ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಂಡರೆ, ಸ್ವಯಂ ಪ್ರೇರಿತರಾಗಿ ಬಂದ ಹಿಂದೂ-ಮುಸ್ಲಿಮ್, ಕ್ರಿಶ್ಚಿಯನ್ ಯುವಕರು ಒಟ್ಟಾಗಿ ವಿಶ್ವನಾಥ್ ಶೆಟ್ಟಿಯ ಜೋಪಡಿಗೆ ಚಾವಣಿ ಸರಿಪಡಿಸಿ, ಬಣ್ಣ ಬಳಿದು ಬಾಗಿಲೊಂದನ್ನು ನಿಲ್ಲಿಸಿಕೊಟ್ಟು ಈ ದೇಶದ ನೈಜ ಬಂಧುತ್ವವನ್ನು ಜಗತ್ತಿಗೆ ಸಾರಿದ್ದಾರೆ.