Home ಟಾಪ್ ಸುದ್ದಿಗಳು ದುಪ್ಪಟ್ಟಾವನ್ನು ತಲೆಯ ಸೆರಗಿನ ರೀತಿ ಧರಿಸಲು ಅವಕಾಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ: ಎಚ್‌.ಡಿ.ಕೆ

ದುಪ್ಪಟ್ಟಾವನ್ನು ತಲೆಯ ಸೆರಗಿನ ರೀತಿ ಧರಿಸಲು ಅವಕಾಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ: ಎಚ್‌.ಡಿ.ಕೆ

ಬೆಂಗಳೂರು: ‘ಹಿಜಾಬ್‌ ಅಥವಾ ಬೇರೆ ಯಾವುದೇ ವಿಷಯಕ್ಕಿಂತ ಹೆಣ್ಣು ಮಕ್ಕಳ ಶಿಕ್ಷಣ ಮುಖ್ಯವಾಗಿದ್ದು, ಇನ್ನಾದರೂ ಸರ್ಕಾರ ತಾಯಿ ಹೃದಯದಿಂದ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಉದಾತ್ತ ಹೆಜ್ಜೆ ಇಡಬೇಕು. ಮಕ್ಕಳ‌ ಹಾಲಿನಂತಹ ಮನಸ್ಸನ್ನು ಒಡೆಯಬಾರದು’ ಎಂದು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಹಾತ್ಮ ಗಾಂಧೀಜಿಯವರ ಧರ್ಮಪತ್ನಿ ಕಸ್ತೂರ್ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು ಎಂದು ಹಿಜಾಬ್‌ಗೆ ಬೆಂಬಲ ವ್ಯಕ್ತಪಡಿಸಿದರು.

ರಾಜಕೀಯ ಕಾರಣಕ್ಕೆ ಮುಂಚೂಣಿಗೆ ಬಂದ ಈ ಎಲ್ಲ ಅನಪೇಕ್ಷಿತ ವಿವಾದಗಳಲ್ಲಿ ಮಕ್ಕಳೇ ಬಲಿಪಶುಗಳಾಗುತ್ತಿದ್ದು, ಈ ವಿವಾದಗಳನ್ನು ಇನ್ನೂ ಜೀವಂತ ಇಡಲು ಕೆಲವರು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಕ್ಕಳ ಮನಸ್ಸಿನಲ್ಲಿ ಯಾರೂ ದ್ವೇಷವನ್ನು ಬಿತ್ತಬಾರದು, ಮುಸ್ಲಿಂ ಮಕ್ಕಳಿಗೆ ದುಪ್ಪಟ್ಟಾವನ್ನು ತಲೆಯ ಸೆರಗಿನ ರೀತಿ ಧರಿಸಲು ಅವಕಾಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ. ಆಗ ಸಮವಸ್ತ್ರ ಬಿಟ್ಟು ಬೇರೆ ವಸ್ತ್ರ ಧರಿಸುವ ಅವಶ್ಯಕತೆ ಇರುವುದಿಲ್ಲ. ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದು ಅವರು ಹೇಳಿದರು.

Join Whatsapp
Exit mobile version