Home ಕ್ರೀಡೆ ಟಿ20 ವಿಶ್ವಕಪ್‌ | ಸೆಮಿಫೈನಲ್‌ ಕನಸು ಕೈ ಬಿಡದ ಪಾಕಿಸ್ತಾನ, ಹೀಗಿದೆ ಬಾಬರ್‌ ಬಳಗದ ಲೆಕ್ಕಾಚಾರ

ಟಿ20 ವಿಶ್ವಕಪ್‌ | ಸೆಮಿಫೈನಲ್‌ ಕನಸು ಕೈ ಬಿಡದ ಪಾಕಿಸ್ತಾನ, ಹೀಗಿದೆ ಬಾಬರ್‌ ಬಳಗದ ಲೆಕ್ಕಾಚಾರ

ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 12, ಗ್ರೂಪ್-2ರ ಮೊದಲೆರಡು ಪಂದ್ಯಗಳಲ್ಲಿ ಸೋತ ಬಳಿಕ ಟೂರ್ನಿಯಿಂದ ಬಹುತೇಕ ಹೊರನಡೆದಿದ್ದ ಪಾಕಿಸ್ತಾನ, ನಂತರದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿದೆ.

ಗುರುವಾರ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಪಾಕ್‌, ಆಫ್ರಿಕಾ ವಿರುದ್ಧ ಡಕ್ವರ್ಥ್‌ ಲೂಯಿಸ್‌ ನಿಯಮದನುಸಾರ 33 ರನ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬಾಬರ್‌ ಅಝಮ್‌ ಬಳಗ ಸೂಪರ್ 12, ಗ್ರೂಪ್-2ರ ಅಂಕಟಪಟ್ಟಿಯಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಸೂಪರ್ 12ರ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ, ಭಾನುವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೂ ಸಹ, ಭಾರತ-ಝಿಂಬಾಬ್ವೆ ಪಂದ್ಯದ ಫಲಿತಾಂಶ ಪಾಕ್‌ ಪಾಲಿಗೆ ನಿರ್ಣಾಯಕವಾಗಲಿದೆ.  

ಗ್ರೂಪ್-2ರಲ್ಲಿ ಎಲ್ಲಾ 6 ತಂಡಗಳು ಈಗಾಗಲೇ ತಲಾ 4 ಪಂದ್ಯಗಳನ್ನಾಡಿದ್ದು, ಅದಾಗಿಯೂ ಯಾವುದೇ ತಂಡಗಳು ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿಲ್ಲ. 6 ಅಂಕಗಳೊಂದಿಗೆ ಟೀಮ್‌ ಇಂಡಿಯಾ ಗ್ರೂಪ್-2ರಲ್ಲಿ ಅಗ್ರಸ್ಥಾನಿಯಾಗಿದೆ. 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ,  2 ಗೆಲುವು 1 ಸೋಲು ಹಾಗೂ 1 ಡ್ರಾದೊಂದಿಗೆ 5 ಅಂಕಗಳನ್ನು ಹೊಂದಿದೆ. 4 ಪಂದ್ಯಗಳಲ್ಲಿ ತಲಾ 2 ಗೆಲುವು-ಸೋಲು ಕಂಡಿರುವ ಪಾಕಿಸ್ತಾನ ಬಳಿ 4 ಅಂಕಗಳಿವೆ.

ನವೆಂಬರ್‌ 6, ಭಾನುವಾರ ಅಡಿಲೇಡ್‌ನಲ್ಲಿ ನಡೆಯುವ ಸೂಪರ್‌ 12 ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆಫ್ರಿಕಾ ಗೆಲುವು ಸಾಧಿಸಿದರೆ 7 ಅಂಕಗಳೊಂದಿಗೆ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ. ಅದೇ ದಿನ ನಡೆಯುವ 2ನೇ ಪಂದ್ಯದಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೂ ಸಹ, ಭಾರತ-ಝಿಂಬಾಬ್ವೆ ತಂಡಗಳ ಫಲಿತಾಂಶದ ಮೇಲೆ ಪಾಕಿಸ್ತಾನ ಸೆಮಿಫೈನಲ್‌ ಹಣೆಬರಹ ನಿರ್ಧಾರವಾಗಲಿದೆ. ವ್ಯತಿರಿಕ್ತವಾಗಿ ಬಾಂಗ್ಲಾ ಹುಲಿಗಳಿಗೆ ಬಾಬರ್‌ ಪಡೆ ಶರಣಾದರೆ ಎಲ್ಲಾ ಲೆಕ್ಕಾಚಾರಗಳು ಅಲ್ಲಿಗೇ ಕೊನೆಗೊಳ್ಳಲಿದೆ.

ಭಾರತ ಝಿಂಬಾಬ್ವೆಯನ್ನು ಮಣಿಸಿದರೆ ಗ್ರೂಪ್-2ರ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ. ಪಾಕಿಸ್ತಾನದ ಕಾಯುವಿಕೆ ವ್ಯರ್ಥವಾಗಲಿದೆ. ಆದರೆ ಪಾಕಿಸ್ತಾನವನ್ನು ಮಣಿಸಿದ ರೀತಿಯಲ್ಲೇ ಭಾರತವನ್ನೂ ಝಿಂಬಾಬ್ವೆ ಮಣಿಸಿ, ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಪಾಕ್‌ ಗೆಲುವು ಸಾಧಿಸಿದರೆ ಭಾರತವನ್ನು ಟೂರ್ನಿಯಿಂದ ಹೊರದಬ್ಬಿ ಪಾಕಿಸ್ತಾನ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಲಿದೆ.

Join Whatsapp
Exit mobile version