ಚೆನ್ನೈ: ಪ್ರಧಾನಿ ಮೋದಿಯನ್ನು ಅಣಕಿಸುವ ಮಕ್ಕಳ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕಾಗಿ ಝೀ ತಮಿಳ್ ಚಾನೆಲ್ ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ಜಾರಿಗೊಳಿಸಿದೆ.
ಐಟಿ ಮತ್ತು ಸೋಶಿಯಲ್ ಮೀಡಿಯಾ ಸೆಲ್ ನ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಸಿ.ಟಿ.ಆರ್ ನಿರ್ಮಲ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ನೋಟಿಸ್ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಝೀ ತಮಿಳ್ ಚಾನೆಲ್ ಆಯೋಜಿಸಿದ ರಿಯಾಲಿಟಿ ಶೋ ‘ಜೂನಿಯರ್ ಸೂಪರ್ ಸ್ಟಾರ್ಸ್ ನಾಲ್ಕನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಮಾನಕರ ಕಮೆಂಟ್ ಮಾಡಲಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಮಕ್ಕಳು ನಡೆಸಿದ ಪ್ರದರ್ಶನವೊಂದರಲ್ಲಿ ಮೋದಿ ಜಾರಿಗೊಳಿಸಿದ ನೀತಿಗಳಾದ ನೋಟು ಅಮಾನ್ಯೀಕರಣ ಮತ್ತು ಜಿ.ಎಸ್. ಟಿ ಮತ್ತು ಬಂಡವಾಳ ಹಿಂದೆಗೆತದಂತಹ ಜನವಿರೋಧಿ ನಿಲುವು ಮತ್ತು ವೈಫಲ್ಯವನ್ನು ಅಣಕಿಸಲಾಗಿತ್ತು.
ಈ ಮಧ್ಯೆ ಪ್ರಧಾನಿ ವಿರುದ್ಧ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ಪರಿಶೀಲಿಸಲು ಚಾನೆಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.