Home ಟಾಪ್ ಸುದ್ದಿಗಳು ನಾನು ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತೇನೆ: ಮುಸ್ಕಾನ್ ಖಾನ್

ನಾನು ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗುತ್ತೇನೆ: ಮುಸ್ಕಾನ್ ಖಾನ್

ಬೆಂಗಳೂರು: ಇದೇ ರೀತಿ ಮತ್ತೆ ಮರುಕಳಿಸಿದರೆ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತೇನೆ ಎಂದು ಕಾಲೇಜ್ ಕ್ಯಾಂಪಸ್‌ಗೆ ಪ್ರವೇಶಿಸುವಾಗ ಯುವಕರ ಗುಂಪೊಂದು ಬುರ್ಖಾ ಮತ್ತು ಹಿಜಾಬ್ ವಿಷಯವಾಗಿ ಮುಗಿಬಿದ್ದಾಗ ತನ್ನ ಹಕ್ಕುಗಳ ಪರವಾಗಿ ನಿಂತು ಖ್ಯಾತಿ ಪಡೆದ ಹದಿಹರೆಯದ ಯುವತಿ ಬೀಬಿ ಮುಸ್ಕಾನ್ ಖಾನ್ ಸುದ್ದಿಗಾರರೊಂದಿಗೆ ತಿಳಿಸಿದರು.

ಮಂಡ್ಯ ಜಿಲ್ಲೆಯ ಪಿ.ಇ.ಎಸ್ ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮುಸ್ಕಾನ್ ಬುರ್ಕಾ ಧರಿಸಿದ್ದಕ್ಕಾಗಿ ಕಾಲೇಜು ಆವರಣದಲ್ಲಿ ನೆರೆದಿದ್ದ ಎಬಿವಿಪಿ ಕಾರ್ಯಕರ್ತರು ಆಕೆಗೆ ಅಡ್ಡಿಪಡಿಸಿದ್ದರು. ನೂರಾರು ವಿದ್ಯಾರ್ಥಿಗಳು‘ಜೈ ಶ್ರೀರಾಮ್’ ಎಂದು ಪ್ರಚೋದನಾಕಾರಿ ಘೋಷಣೆ ಕೂಗುತ್ತಾ ದಾಂಧಲೆ ಆರಂಭಿಸಿದಾಗ ಆಕೆ ಅದಕ್ಕೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ತಿರುಗೇಟು ನೀಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದೆಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

“ನಾನು ಅಲ್ಲಾ-ಹುಅಕ್ಬರ್ ಎಂದು ಕೋಮುವಾದಿಯಾಗಿ ಕೂಗಿಲ್ಲ. ನಾನು ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವುದಿಲ್ಲ”, ದೇಶದಾದ್ಯಂತ ಜನರು ತಮ್ಮ ಪದಗಳ ಆಯ್ಕೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿಯನ್ನು ಮುಂದೆ ಎದುರಿಸಿದರೆ ಎಂಬ ಸುದ್ದಿಗಾರರ ಪ್ರಶ್ನೆಗೆ, “ನಾನು ಖಂಡಿತವಾಗಿಯೂ ಹಿಂದೂಸ್ತಾನ್ ಜಿಂದಾಬಾದ್ ಎಂದು ಹೇಳುತ್ತೇನೆ” ಎಂದು ಮುಸ್ಕಾನ್ ಉತ್ತರಿಸಿದರು.

Join Whatsapp
Exit mobile version