Home ಟಾಪ್ ಸುದ್ದಿಗಳು ಮುಂಬೈ, ದಿಲ್ಲಿಯ ಬಿಬಿಸಿ ಕಚೇರಿಗಳಲ್ಲಿ ಮೂರನೇ ದಿನವೂ ಮುಂದುವರಿದ ಐಟಿ ಶೋಧ

ಮುಂಬೈ, ದಿಲ್ಲಿಯ ಬಿಬಿಸಿ ಕಚೇರಿಗಳಲ್ಲಿ ಮೂರನೇ ದಿನವೂ ಮುಂದುವರಿದ ಐಟಿ ಶೋಧ

ಮುಂಬೈ: ಸತತ ಮೂರನೆಯ ದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂಬೈ ಮತ್ತು ದಿಲ್ಲಿಯ ಬಿಬಿಸಿ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


ಸಿಬ್ಬಂದಿಯ ಕಂಪ್ಯೂಟರ್’ಗಳು ಮತ್ತು ದಾಖಲೆಗಳು, ಸಂಗ್ರಹಿಸಿದ ಹಣಕಾಸಿನ ಮಾಹಿತಿಗಳು ಮೊದಲಾದವುಗಳ ಪ್ರತಿಗಳನ್ನು ಒಂದಷ್ಟು ಸಿಬ್ಬಂದಿಗೆ ಐಟಿ ಅಧಿಕಾರಿಗಳು ತೋರಿಸಿದರು.
ಮುಂಬೈ ಮತ್ತು ದಿಲ್ಲಿಯ ಬಿಬಿಸಿ- ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್’ನ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯವರ ಸರ್ವೆಯು ಮಂಗಳವಾರ 11.30 ಗಂಟೆಗೆ ಆರಂಭವಾಗಿದ್ದು, ಗುರುವಾರ ಮೂರನೆಯ ದಿನಕ್ಕೆ ಕಾಲಿಟ್ಟಿದೆ. ಇದರಲ್ಲಿ 45 ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗಿದೆ.


ಈ ಸರ್ವೆ ಇನ್ನೂ ಸ್ವಲ್ಪ ಕಾಲ ಉದ್ದಕ್ಕೆ ಎಳೆಯಲಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಪಿಟಿಐ ಮೂಲಕ ತಿಳಿಸಿದ್ದಾರೆ.
ಸಮಯ ನಿರ್ಣಯಿಸಿದಂತೆ ಇದನ್ನು ಮುಗಿಸುವುದು ಸ್ವಲ್ಪ ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ವಿದೇಶೀ ತೆರಿಗೆ ನೀತಿ, ಬಿಬಿಸಿ ಸಬ್ಸಿಡರಿ ಕಂಪೆನಿಗಳ ವರ್ಗಾಯಿಸುವಿಕೆ ವಿಧಾನ ಇವೆಲ್ಲವುಗಳಿಂದಾಗಿ ಸಮೀಕ್ಷೆ ನಡೆಸುವುದು ಸ್ವಲ್ಪ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುನ್ಮಾನ ಉಪಕರಣಗಳಿಂದ ದತ್ತಾಂಶಗಳನ್ನು ನಕಲು ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಹಣಕಾಸು ವ್ಯವಹಾರ, ಕಾರ್ಪೊರೇಟ್ ಸಂರಚನೆಯ ಅಂಶಗಳು, ಸುದ್ದಿ ಸಂಸ್ಥೆಯ ಬಗೆಗಿನ ಸಂಪೂರ್ಣ ವಿವರ ಮುಂತಾದವುಗಳನ್ನೆಲ್ಲ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.


ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಲಂಡನ್ನಿನ ಬಿಬಿಸಿ ಮುಖ್ಯ ಕಚೇರಿಯು ಸಾರ್ವಜನಿಕ ಸುದ್ದಿಗೆ ತಡೆ ಎಂದು ಖಂಡಿಸಿದೆ. ಪ್ರತಿ ಪಕ್ಷಗಳವರು ಆದಾಯ ತೆರಿಗೆ ದಾಳಿಯನ್ನು ರಾಜಕೀಯ ಪ್ರತೀಕಾರ ಎಂದು ಬಣ್ಣಿಸಿವೆ.

Join Whatsapp
Exit mobile version