ಶಿವಮೊಗ್ಗ: ನಾನು ಇವತ್ತೇ ಮದುವೆ ಗಂಡು ಆಗಲು ತಯಾರಾಗಿದ್ದೇನೆ ಎಂಬ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಂತ್ರಿಯಾಗಬೇಕೆಂಬ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ಇವತ್ತು ಬಂದು ಮಂತ್ರಿ ಆಗು ಅಂದರೆ ಇವತ್ತೆ ಆಗುತ್ತೇನೆ. ಇದೆಲ್ಲಾ ನನ್ನ ಕೈಯಲ್ಲಿ ಇಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರದ ನಾಯಕರು ಚರ್ಚೆ ಮಾಡಬೇಕು. ಖಾಲಿ ಇರುವ ಸ್ಥಾನಗಳೆಲ್ಲಾ ಭರ್ತಿ ಮಾಡಲಿ ಎನ್ನುವುದು ನನ್ನ ಅಪೇಕ್ಷೆ. ಆರೋಪ ಮುಕ್ತರಾದ ಮೇಲೆ ಅವಕಾಶ ಕೊಡುತ್ತೇವೆ ಅಂದಿದ್ದರು. ಆದರೆ ಅವರು ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿದರು.
ನಾನು ಇವತ್ತು ಮದುವೆ ಗಂಡು ಆಗುವುದಕ್ಕೆ ತಯಾರಿದ್ದೇನೆ. ತೀರ್ಮಾನ ಮಾಡಬೇಕಾದವರು ಹಿರಿಯರು. ಅವರೇನು ಮಾಡಲಿಲ್ಲ ಅಂದರೆ ನಾನೇನು ಮಾಡಲಿ. ನನ್ನ ಮನೆ ದೇವರು ಚೌಡೇಶ್ವರಿ ಈ ಆರೋಪದಿಂದ ನನ್ನನ್ನು ಮುಕ್ತ ಮಾಡಿದ್ದಾಳೆ. ನಾನು ಆರೋಪ ಮುಕ್ತ ಆಗಿರುವುದರಿಂದ ಸಿಎಂ, ಯಡಿಯೂರಪ್ಪ, ಕಟೀಲ್ ಬೇಗ ತೀರ್ಮಾನ ತೆಗೆದುಕೊಳ್ಳಬೇಕು. ನನ್ನ ಪ್ರಕರಣವೇ ಬೇರೆ, ಬೇರೆಯವರ ಪ್ರಕರಣವೇ ಬೇರೆ ಹೀಗಾಗಿ ನಮ್ಮ ನಾಯಕರು ನಿರ್ಧರಿಸಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.