Home ಟಾಪ್ ಸುದ್ದಿಗಳು ಹೈದರ್‌ಪೊರ ಎನ್‌ಕೌಂಟರ್‌: ಅಂತಿಮ ಸಂಸ್ಕಾರಕ್ಕಾಗಿ ಶವ ಹೊರತೆಗೆಯಲು ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೈದರ್‌ಪೊರ ಎನ್‌ಕೌಂಟರ್‌: ಅಂತಿಮ ಸಂಸ್ಕಾರಕ್ಕಾಗಿ ಶವ ಹೊರತೆಗೆಯಲು ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕಳೆದ ವರ್ಷ ಕಾಶ್ಮೀರದ ಹೈದರ್‌ಪೊರದಲ್ಲಿ ನಡೆದ ವಿವಾದಾತ್ಮಕ ಎನ್‌ಕೌಂಟರ್‌ನಲ್ಲಿ ಹತರಾಗಿದ್ದ ನಾಲ್ವರಲ್ಲಿ ಒಬ್ಬನಾದ ತಮ್ಮ ಮಗ ಅಮೀರ್ ಮಗ್ರೆಯ ಶವವನ್ನು ಸೂಕ್ತ ರೀತಿಯಲ್ಲಿ ಅಂತಿಮ ಸಂಸ್ಕಾರ ನಡೆಸುವ ಸಲುವಾಗಿ ಸಮಾಧಿಯಿಂದ ಹೊರತೆಗೆಯಲು ಅನುಮತಿ ನೀಡಬೇಕೆಂದು ಕೋರಿದ್ದ ಅಮೀರ್‌ ತಂದೆಯ ಮನವಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಮೊಹಮ್ಮದ್ ಲತೀಫ್ ಮಗ್ರೆ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನಡುವಣ ಪ್ರಕರಣ].

ಗೌರವಯುತವಾಗಿ ಅಂತಿಮ ಸಂಸ್ಕಾರ ಮಾಡಿಲ್ಲ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಇಂತಹ ಪ್ರಕರಣಗಳನ್ನು ಕೇವಲ ಭಾವನೆಗಳ ಮೇಲೆ ಅವಲಂಬಿತವಾಗಿ ತೀರ್ಮಾನಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.

“ಮೃತರ ದೇಹಕ್ಕೆ ಘನತೆಯ ಹಕ್ಕು ಕೂಡ ಇದೆ. ನಮಗೆ ಮೇಲ್ಮನವಿದಾರರ ಭಾವನೆಗಳು ತಿಳಿದಿದೆ. ನ್ಯಾಯಾಲಯ ಕಾನೂನಾತ್ಮಕ ಆಡಳಿತವನ್ನು ಗಮನಿಸದೆ ಭಾವನೆಗಳನ್ನು ಆಧರಿಸಿಇಂತಹ ಪ್ರಕರಣಗಳನ್ನು ನಿರ್ಧರಿಸಲಾಗದು” ಎಂದು ಅದು ಹೇಳಿತು.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು


• ಮೃತದೇಹವನ್ನು ಹೂಳಲಾಗಿದ್ದು ಅದು ಕಾನೂನಿನ ವ್ಯಾಪ್ತಿಗೆ ಬರುತ್ತದೆ. ಅದನ್ನು ಕದಲಿಸುವುದು ನ್ಯಾಯಾಲಯದ ಸಮ್ಮತಿಗೆ ಒಳಪಟ್ಟಿರುತ್ತದೆ
• ಸಮಾಧಿಯ ಪಾವಿತ್ರ್ಯ ಕಾಪಾಡಿಕೊಳ್ಳಬೇಕು. ನ್ಯಾಯದ ಹಿತದೃಷ್ಟಿಯಿಂದ ನ್ಯಾಯಾಲಯ ಶವ ಹೊರತೆಗೆಯಲು ಆದೇಶಿಸುವುದಿಲ್ಲ.
• ಧಾರ್ಮಿಕ ಪದ್ದತಿ ಪ್ರಕಾರ ಮೃತರ ಅಂತಿಮ ಸಂಸ್ಕಾರಕ್ಕೆ ಅನುಮತಿ ನೀಡಲು ನಿರಾಕರಿಸಿರುವ ಹೈಕೋರ್ಟ್‌ ಆದೇಶ ನ್ಯಾಯಸಮ್ಮತ ಮತ್ತು ಸೂಕ್ತವಾಗಿದೆ.
• ಪರಿಣಾಮ ಅರ್ಜಿ ವಿಫಲವಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವಂತಹ ಮತ್ತು ಸಮಾಧಿ ಸ್ಥಳದಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವಂತಹ ಕಾಶ್ಮೀರ ಹೈಕೋರ್ಟ್‌ ಆದೇಶಗಳನ್ನು ಪ್ರತಿವಾದಿಗಳು (ಕೇಂದ್ರಾಡಳಿತ ಪ್ರದೇಶದ ಸರ್ಕಾರ) ಪಾಲಿಸಬೇಕು.

ಹಿನ್ನೆಲೆ

ಶ್ರೀನಗರದ ಹೈದರ್‌ಪೋರದಲ್ಲಿ ನವೆಂಬರ್ 15, 2021ರಂದು ಪೊಲೀಸರು ಮತ್ತು ಭದ್ರತಾಪಡೆಗಳ ಎನ್‌ಕೌಂಟರ್‌ಗೆ ನಾಲ್ವರು ಬಲಿಯಾಗಿದ್ದರು. ಅವರಲ್ಲಿ ಕೆಲವರು ಮುಗ್ಧ ನಾಗರಿಕರು ಎಂಬ ಸಂಗತಿ ಚರ್ಚೆಗೆ ಗ್ರಾಸವಾಗಿತ್ತು. ಘಟನೆಯಲ್ಲಿ ಮೃತಪಟ್ಟ ಡಾ. ಮುದಸ್ಸಿರ್‌ ಗುಲ್‌ ಮತ್ತು ಅಲ್ತಾಫ್‌ ಭಟ್‌ ಅವರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದರೂ ಅಮೀರ್‌ ಪಾರ್ಥಿವ ಶರೀರವನ್ನು ತಮಗೆ ನೀಡಿರಲಿಲ್ಲ ಎಂದು ತಿಳಿಸಿ ಅವರ ತಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್‌ಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಕೀಲರು ಸಲ್ಲಿಸಿದ್ದ ಅಮೀರ್‌ ಪಾರ್ಥಿವ ಶರೀರದ ಸಂಸ್ಕಾರದ ವಿಡಿಯೋದಲ್ಲಿ ಇಸ್ಲಾಂನ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿರುವುದು ಕಂಡುಬಂದಿತ್ತು.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version