ಬೆಂಗಳೂರು: ಬೆಂಗಳೂರಿನ ಐದು ವಾರ್ಡ್ ಗಳಿಗೆ ಆಮ್ ಆದ್ಮಿ ಪಾರ್ಟಿಯು ಉನ್ನತ ಶಿಕ್ಷಣ ಪಡೆದ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಐವರು ಮಹಿಳಾ ಮುಖಂಡರನ್ನು ಸೋಮವಾರ ಪಕ್ಷಕ್ಕೆ ಸೇರಿಸಿಕೊಂಡು, ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳೆಂದು ಘೋಷಿಸಲಾಯಿತು.
ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ , “ಬೇರೆ ಪಕ್ಷಗಳು ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು, ನಾಮಕಾವಸ್ತೆಗಾಗಿ ದುರ್ಬಲ ಮಹಿಳೆಯರನ್ನು ಕಣಕ್ಕಿಳಿಸುತ್ತಾ ಬಂದಿವೆ. ಈ ಮೂಲಕ ಮಹಿಳಾ ಮೀಸಲು ಕ್ಷೇತ್ರಗಳಲ್ಲೂ ಪುರುಷ ರಾಜಕಾರಣಿಗಳು ಪರೋಕ್ಷ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ಆಮ್ ಆದ್ಮಿ ಪಾರ್ಟಿಯು ಮಹಿಳಾ ಮೀಸಲಾತಿಯ ಆಶಯವನ್ನು ಸಾರ್ಥಕಗೊಳಿಸುತ್ತಿದ್ದು, ಸಬಲೀಕರಣಗೊಂಡ ಮಹಿಳೆಯರನ್ನು ಕಣಕ್ಕಿಳಿಸುತ್ತಿದೆ. ಉನ್ನತ ಶಿಕ್ಷಣ ಪಡೆದಿರುವ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆಯರನ್ನು ಹುಡುಕಿ ಟಿಕೆಟ್ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಅರ್ಥ ನೀಡುತ್ತಿದೆ. ಜಡ್ಡುಗಟ್ಟಿರುವ ಚುನಾವಣಾ ರಾಜಕೀಯದಲ್ಲಿ ಪರಿವರ್ತನೆ ತರಲು ಆಮ್ ಆದ್ಮಿ ಪಾರ್ಟಿಯು ಮುನ್ನುಡಿ ಬರೆಯುತ್ತಿದೆ” ಎಂದು ಹೇಳಿದರು.
ಬುಧವಾರ ವಿಧಾನಸೌಧಕ್ಕೆ ಮುತ್ತಿಗೆ:
ಹತ್ತು ದಿನಗಳಲ್ಲಿ ಆರು ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ 30ಕ್ಕೂ ಹೆಚ್ಚು ಸಾರಿಗೆ ನೌಕರರು ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲುರವರ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 14ರ ಬುಧವಾರದಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ ಎಂದು ಪಕ್ಷದ ಮಾಧ್ಯಮ ವಕ್ತಾರ ಮೋಹನ್ ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ವಕೀಲ ಲೋಹಿತ್ ಕುಮಾರ್ , ಉಮೇಶ್ ಪಿಳ್ಳೇಗೌಡ ಸೇರಿದಂತೆ ಸೇರ್ಪಡೆಗೊಂಡ ಎಲ್ಲ ಮಹಿಳಾ ನಾಯಕಿಯರು ಇದ್ದರು.