ಶನಿವಾರಸಂತೆ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹಾಸನ ಜಿಲ್ಲೆಯ ಎಸಳೂರು ಪೊಲೀಸರು ಬಂಧಿಸಿದ್ದಾರೆ.
ಸುಳುಗಳಲೆ ನಿವಾಸಿ ಸಂತೋಷ್(30) ಕೊಲೆಯಾದವರು ಎಂದು ಗುರುತಿಸಲಾಗಿದೆ. ಹತ್ಯೆ ಸಂಬಂಧ ಸಂತೋಷ್ ಪತ್ನಿ ಶ್ರುತಿ(24) ಹಾಗೂ ಆಕೆಯ ಪ್ರಿಯಕರ ತ್ಯಾಗರಾಜ ಕಾಲನಿ ನಿವಾಸಿ ಚಂದ್ರಶೇಖರ್(20) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪಕ್ಕದ ಮನೆ ಅವಿವಾಹಿತ ಯುವಕ ಚಂದ್ರಶೇಖರ್ ಜೊತೆ ಶ್ರುತಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು ಹಾಗೂ ಇತರೆ ಯುವಕರ ಜತೆಯೂ ಸಲಿಗೆ, ಸ್ವಚ್ಛಂದದಲ್ಲಿದ್ದು, ಪುತ್ರಿಯನ್ನು ಕಡೆಗಣಿಸಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ನಡುವೆ ಕೆಲಸ ನಿಮಿತ್ತ ಸಕಲೇಶಪುರದ ಬಿಕ್ಕೋಡು ಗ್ರಾಮಕ್ಕೆ ಬರುತ್ತಿದ್ದ ಸಂತೋಷನನ್ನು ಮುಗಿಸಲು ಹೊಸದಾಗಿ ಖರೀದಿಸಿದ್ದ ಕಾರಿನಲ್ಲಿ ಹಂತಕರು ಹಿಂಬಾಲಿಸಿದರು. ದಾರಿಯುದ್ದಕ್ಕೂ ಹತ್ಯೆಗೆ ಯತ್ನಿಸುತ್ತಲೇ ಇದ್ದರು. ಆದರೆ, ಸಾಧ್ಯವಾಗಿರಲಿಲ್ಲ. ದಟ್ಟವಾದ ಅರಣ್ಯದ ನಡುವೆ ನಿರ್ಜನ ಪ್ರದೇಶ ಐಗೂರು ರಸ್ತೆಯಲ್ಲಿ ಬೈಕ್ ತಡೆದ ಹಂತಕರು,‘ಕಾರಿನಲ್ಲಿ ಪೆಟ್ರೋಲ್ ಮುಗಿದಿದೆ, ತರಲು ಬೈಕ್ ನಲ್ಲಿ ಡ್ರಾಪ್ ಕೊಡಿ’ ಎಂದು ಕೇಳುತ್ತಲೇ, ಮತ್ತೊಬ್ಬ ಹಿಂಭಾಗದಲ್ಲಿ ನಿಂತು ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ನಂತರ ಹೊಸ ಕಾರಿನಿಂದ ಬೈಕ್ ಗೆ ಡಿಕ್ಕಿ ಹೊಡೆಸಿ ಬೀಳುವಂತೆ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಿದ್ದರು.
ಆರೋಪಿಗಳಿಂದ ಮಾಹಿತಿ ತಿಳಿದ ಶ್ರುತಿ ಪತಿ ಸಂತೋಷ್ ಓಡಿಸುತ್ತಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಶ್ರುತಿ ಯಸಳೂರು ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ಮರಣೋತ್ತರ ಪರೀಕ್ಷೆ ವೇಳೆ ಸಂತೋಷ್ ಮೈಮೇಲೆ ಯಾವುದೇ ಗಾಯ ಇಲ್ಲದ್ದನ್ನು ಕಂಡು ಪೊಲೀಸರು ಪತ್ನಿ ಶ್ರುತಿಯನ್ನು ಮರು ವಿಚಾರಣೆಗೆ ಒಳಪಡಿಸಿದಾಗ ಪತಿಯನ್ನು ಕೊಲೆಮಾಡಿರುವ ವಿಷಯ ತಿಳಿಸಿರುವುದಾಗಿ ಸಕಲೇಶಪುರ ಇನ್ಸ್ ಪೆಕ್ಟರ್ ಕೆ.ಎಂ.ಚೈತನ್ಯಕುಮಾರ್ ವಿವರಿಸಿದರು. ಆರೋಪಿಗಳಾದ ಕಿರಣ್ ಹಾಗೂ ಚಂದ್ರಶೇಖರ್ ಶ್ರುತಿ ಪತಿ ಸಂತೋಷ್ ನಿಂದ ಹಣವನ್ನು ಸಾಲ ಪಡೆದಿದ್ದರು. ಸಾಲ ಕೇಳುತ್ತಿದ್ದ ದ್ವೇಷವೂ ಇತ್ತು ಎನ್ನಲಾಗಿದೆ.
ಈ ಕುರಿತು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.